ನೇತ್ರಾವತಿ-ಕುಮಾರಧಾರ ನದಿಗಳ ಸಂಗಮ ಸ್ಥಾನದಲ್ಲಿರುವ ಪರಶಿವನ ಪವಿತ್ರ ತಾಣವೇ ಸಹಸ್ರಲಿಂಗೇಶ್ವರನ ಪರಮ ಸನ್ನಿಧಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಅಂತರಗಂಗೆ ಈ ತಾಣದಲ್ಲಿ ಸಹಸ್ರ ಲಿಂಗೇಶ್ವರನೊಂದಿಗೆ ಮಹಾಕಾಳಿ, ಕಾಲಭೈರವ ನೆಲೆಸಿದ್ದಾರೆ. ಗಂಗೆ ಯಮುನೆಯವರ ಸಂಗಮವಾಗಿ ಪ್ರಯಾಗವೆಂದು ಈ ಕ್ಷೇತ್ರ ಹೆಸರು ಪಡೆದಿದೆ.
ಉತ್ತರದ ಪ್ರಯಾಗದಂತೆ ದಕ್ಷಿಣದ ಗಯಾಪದವಾಗಿ ಭಕ್ತಿ ಮುಕ್ತಿಗಳನ್ನು ಕರುಣಿಸುವ ಸಹಸ್ರ ಲಿಂಗೇಶ್ವರನ ಸನ್ನಿಧಿ ಸದ್ಗತಿದಾಯಕ ಕ್ರಿಯೆಗಳ ಮೂಲಕ ಮೋಕ್ಷಧಾಮ ಎನಿಸಿದೆ. 2002ರಲ್ಲಿ ನವೀಕೃತಗೊಂಡಿರುವ ಇಲ್ಲಿ ವೈಭವೋಪೇತವಾಗಿ ಉತ್ಸವ, ಮಖೆ ಜಾತ್ರೆ ನಡೆಯುತ್ತದೆ. ಇಲ್ಲಿ ಮಹಾಕಾಳಿ ದೇವಿಯ ದೇಗುಲವಿದೆ. ನೇತ್ರಾವತಿಯ ಉತ್ತರಕ್ಕೆ ಕಲ್ಕುಡ ದೈವಸ್ಥಾನವಿದೆ.
ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30ರವರೆಗೆ ಸಂಜೆ 5 ರಿಂದ 8ರವರೆಗೆ ದೇಗುಲ ತೆರೆದಿರುತ್ತದೆ. ಬೆಳಿಗ್ಗೆ 7.30, ಮಧ್ಯಾಹ್ನ 12 ಸಂಜೆ 7ಕ್ಕೆ ದಿನದ ಪೂಜೆ ಇದೆ. ಪುತ್ತೂರಿನಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ತಲುಪಲು ಸಾಕಷ್ಟು ಬಸ್ ವ್ಯವಸ್ಥೆ ಇದೆ. ಪ್ರಾಚೀನ ತೀರ್ಥಕ್ಷೇತ್ರವಾದ ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.