ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತರಾತುರಿಯಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡಿತ್ತು.
ಆದರೆ ಮೋದಿಯವರು ಭೇಟಿ ನೀಡಿ ತೆರಳಿದ ನಂತರ ರಸ್ತೆ ಕಾಮಗಾರಿ ನಡೆಸಿದ ಸ್ಥಳದಲ್ಲಿ ಮತ್ತೆ ಗುಂಡಿ ಬಿದ್ದಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಇದರ ಫೋಟೋ ಹರಿದಾಡುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಒಂದಷ್ಟು ರಿಪೇರಿ ಕೆಲಸ ಮಾಡಿತ್ತು.
ಇದೀಗ ಯುವಕರೊಬ್ಬರು ನರೇಂದ್ರ ಮೋದಿಯವರು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಹದಗೆಟ್ಟ ರಸ್ತೆ ಅವ್ಯವಸ್ಥೆ. ಹೌದು, ಪುತ್ತೂರಿನ ಲಿಖಿತ್ ರೈ ಎಂಬ ಯುವಕ ‘ಕಮ್ ಬ್ಯಾಕ್ ಮೋದಿ, ರೋಡ್ ವರ್ಕ್ ಸೀರ್ಫ್ ಮೋದಿ ಹೈ ತೋ ಮುಮ್ಕೀನ್ ಹೈ. ಪಾಟ್ ಹೋಲ್ ಸೇ ಆಜಾದಿ, ವಿ ಡಿಮ್ಯಾಂಡ್ ಸೇಫ್ ರೋಡ್ಸ್ ಎಂಬ ಫಲಕ ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್ ನಂತೂರಿನಲ್ಲಿ ಅವರು ಒಂದು ಗಂಟೆಗಳ ಕಾಲ ಈ ಪ್ರತಿಭಟನೆ ನಡೆಸಿದ್ದು, ಇದೇ ಸ್ಥಳದಲ್ಲಿ ವಿದ್ಯಾರ್ಥಿಯೊಬ್ಬ ಬೈಕ್ ನಲ್ಲಿ ಬರುವಾಗ ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದ ಲಿಖಿತ್ ರೈ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನರೇಂದ್ರ ಮೋದಿಯವರು ಮತ್ತೆ ಬರಲಿ. ಆ ಸಂದರ್ಭದಲ್ಲಿಯಾದರೂ ರಸ್ತೆ ಸರಿಯಾಗಲಿ ಎಂದು ಲಿಖಿತ್ ರೈ ಬಯಸುತ್ತಿದ್ದಾರೆ.