ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರು ಹತ್ಯೆಗಳು ನಡೆದಿದ್ದವು. ಇದರ ಪರಿಣಾಮ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಕಟ್ಟೆಚರ ವಹಿಸಿದ್ದಾರೆ. ಜೊತೆಗೆ ಮುನ್ನೆಚ್ಚರಿಕಾ ಕಾರ್ಯಕ್ರಮವಾಗಿ ದಕ್ಷಿಣ ಕನ್ನಡದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಇದು ಮದ್ಯ ಪ್ರಿಯರಿಗೆ ಸಂಕಷ್ಟ ತಂದೊಡ್ಡಿದ್ದು, ಹೀಗಾಗಿ ಪಕ್ಕದ ಉಡುಪಿ ಜಿಲ್ಲೆಯ ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಖರೀದಿಸುತ್ತಿದ್ದಾರೆ. ಇದರ ಪರಿಣಾಮ ಉಡುಪಿ ಜಿಲ್ಲೆಯ ಮದ್ಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂದು ಹೇಳಲಾಗಿದೆ.
ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಾದ ಉಡುಪಿ ಜಿಲ್ಲೆಗೆ ಸೇರಿದ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಕಾಪು ಮತ್ತು ಪಲಿಮಾರುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮದ್ಯ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ತಮಗೆ ಬೇಕಾದ ಬ್ರ್ಯಾಂಡ್ ಖರೀದಿ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ ಇನ್ನು ಎಷ್ಟು ದಿನಗಳ ಕಾಲ ಮುಂದುವರಿಯುತ್ತದೋ ಎಂಬ ಆತಂಕದಲ್ಲಿ ಸ್ಟಾಕ್ ಇಟ್ಟುಕೊಳ್ಳುವ ಸಲುವಾಗಿ ಮದ್ಯ ಪ್ರಿಯರು ಸಾಕಷ್ಟು ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮಣಿಪಾಲದ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ಗಳಿಗೂ ದಕ್ಷಿಣ ಕನ್ನಡದ ಮದ್ಯ ಪ್ರಿಯರು ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.