ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ರಾಷ್ಟ್ರೀಯ ವಿಪತ್ತಿನ ಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ. ಮಳೆಯಿಂದಾಗಿ ಉಂಟಾಗಿರುವ ವಿನಾಶಕಾರಿ ಪ್ರವಾಹದಿಂದ ಪಾರಾಗಲು ಹಲವಾರು ಕ್ರಮಗಳನ್ನು ಘೋಷಿಸಿದ್ದಾರೆ. ಈ ಪ್ರವಾಹದಲ್ಲಿ ಈಗಾಗಲೇ 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ, ಡಜನ್ಗೂ ಅಧಿಕ ಜನರು ಕಣ್ಮರೆಯಾಗಿದ್ದಾರೆ. ಕ್ವಾಝುಲು-ನಟಾಲ್ ಕರಾವಳಿಯಾದ್ಯಂತ 4 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಘೋಷಣೆ ಮಾಡಲಾಗಿದ್ದ ವಿಪತ್ತಿನ ಸ್ಥಿತಿಗೆ ಅಂತ್ಯ ಹಾಡಿದ ಕೇವಲ ಹದಿನೈದು ದಿನಗಳಲ್ಲಿ ರಾಮಫೋಸಾ ಹೊಸ ವಿಪತ್ತಿನ ಸ್ಥಿತಿಯನ್ನು ಘೋಷಿಸಿದ್ದಾರೆ.
ನಾಲ್ಕು ದಿನಗಳ ಕಾಲ ಬಿಡದೇ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಮಫೋಸಾ ಹೇಳಿದ್ದಾರೆ.
KZN ನಲ್ಲಿ ಕಳೆದ ವಾರ ಪ್ರಾಂತೀಯ ವಿಪತ್ತಿನ ಸ್ಥಿತಿಯನ್ನು ಘೋಷಿಸಲಾಗಿದ್ದರೂ, ಪ್ರವಾಹವು ಡರ್ಬನ್‌ನಿಂದ ಇಡೀ ದೇಶಕ್ಕೆ ಇಂಧನ ಮಾರ್ಗಗಳು ಮತ್ತು ಆಹಾರ ಪೂರೈಕೆಯನ್ನು ಅಡ್ಡಿಪಡಿಸಿದೆ ಎಂದು ಅಧ್ಯಕ್ಷರು ಹೇಳಿದರು, ಇದು ದಕ್ಷಿಣ ಆಫ್ರಿಕಾದ ಪ್ರವೇಶದ ಮುಖ್ಯ ಬಂದರು ಮತ್ತು ಆಫ್ರಿಕಾ ಖಂಡದ ಅತಿದೊಡ್ಡ ಬಂದರಾಗಿದೆ.
ಭಾರೀ ಮಳೆಯು 400ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದ್ದು ಅಪಾಯಕಾರಿ ಪ್ರವಾಹ ಹಾಗೂ ಭೂ ಕುಸಿತಗಳಿಂದಾಗಿ KZNನಲ್ಲಿ ಡಜನ್ಗಟ್ಟಲೇ ಜನರು ಇನ್ನೂ ಕಾಣೆಯಾಗಿದ್ದಾರೆ. ಪ್ರವಾಹವು ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ, ವಿದ್ಯುತ್ ಮತ್ತು ನೀರಿನ ಸೇವೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಆಫ್ರಿಕಾದ ಅತ್ಯಂತ ಜನನಿಬಿಡ ಬಂದರುಗಳಲ್ಲಿ ಒಂದಾದ ಡರ್ಬನ್‌ನಲ್ಲಿ ಕಾರ್ಯಾಚರಣೆಯನ್ನು ಅಡ್ಡಿಪಡಿಸಿದೆ.ಪ್ರ ತಿಕೂಲ ಹವಾಮಾನ ಪರಿಸ್ಥಿತಿಗಳು ಇತರ ಪ್ರಾಂತ್ಯಗಳ ಮೇಲೂ ಪರಿಣಾಮ ಬೀರುವ ಲಕ್ಷಣಗಳಿವೆ ಎಂದು ರಮಾಫೋಸಾ ಆತಂಕ ಹೊರ ಹಾಕಿದ್ದಾರೆ.