ಮದುವೆ ಸ್ವರ್ಗದಲ್ಲೇ ನಿಶ್ಚಿಯವಾಗಿರುತ್ತದೆ ಅನ್ನೋ ಮಾತಿದೆ. ಆದರೆ ಎಲ್ಲಾ ಮದುವೆಗಳೂ ಸುಖಾಂತ್ಯ ಕಾಣುತ್ತವೆ ಎಂದೇನಿಲ್ಲ. ಮದುವೆಯಾಗಿ ಕೆಲ ದಿನಗಳಲ್ಲೇ ಸಂಬಂಧ ಹಳಸುವುದು, ವಿಚ್ಛೇದನ ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಮದುವೆಗೂ ಮೊದಲು ಮತ್ತು ನಂತರ ದಂಪತಿಗಳು ಜಗಳವಾಡುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಜಗಳಕ್ಕೆ ವಿಚಾರಗಳ ಘರ್ಷಣೆಯೇ ಕಾರಣ. ಆದರೆ ಕೆಲವು ಸಂಬಂಧಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಕಿತ್ತಾಟಗಳು ನಡೆಯುತ್ತವೆ. ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಆಗುವುದೇ ಇಲ್ಲ.
ಹೆಚ್ಚು ಜಗಳಗಳಾದಾಗ ದಂಪತಿಗಳು ಏನು ಮಾಡಬೇಕು?
ಇಬ್ಬರು ಒಟ್ಟಿಗೆ ಬಾಳಿದಾಗ ಸಣ್ಣ ಪುಟ್ಟ ಜಗಳ ಆಗುವುದು ಸಾಮಾನ್ಯ. ಕೋಪ ಮಾಡಿಕೊಂಡವರ ಮನವೊಲಿಸಿದ ನಂತರ ಎಲ್ಲವೂ ಮೊದಲಿನಂತಾಗುತ್ತದೆ. ಆದರೆ ಮತ್ತೆ ಮತ್ತೆ ಜಗಳ ನಡೆಯುತ್ತಿದ್ದರೆ ಅದು ಕಿರಿಕಿರಿಗೆ ಕಾರಣವಾಗಬಹುದು. ನಿಧಾನವಾಗಿ ಗಂಭೀರ ಸ್ವರೂಪ ಪಡೆಯಬಹುದು. ನಿರಂತರ ಜಗಳಗಳಿಂದಾಗಿ ದಂಪತಿಗಳು ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಅದೇ ಸಮಯದಲ್ಲಿ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ. ಈ ಸಂಬಂಧವನ್ನು ಸುಧಾರಿಸುವುದು ಹೇಗೆ? ಜಗಳವಾಗಲು ಕಾರಣವೇನು ಅನ್ನೋದನ್ನು ನೋಡೋಣ.
ಪರಸ್ಪರರನ್ನು ಅರ್ಥಮಾಡಿಕೊಳ್ಳದಿರುವುದು
ದಂಪತಿಗಳಲ್ಲಿ ಪರಸ್ಪರರನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಿದ್ದಲ್ಲಿ ಮಾತ್ರ ಸಂಬಂಧ ಚೆನ್ನಾಗಿರುತ್ತದೆ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳದೇ ಇದ್ದಾಗ ಘರ್ಷಣೆ ಸಾಮಾನ್ಯ. ಆಗಾಗ್ಗೆ ಜಗಳವಾಡುವ ಮೂಲಕ ನಿಮ್ಮ ಅಭಿಪ್ರಾಯ ಮಂಡಿಸಲು ಪ್ರಯತ್ನಿಸುತ್ತೀರಿ. ಇದರಿಂದಾಗಿ ಪರಿಸ್ಥಿತಿ ಹದಗೆಡುತ್ತದೆ. ಪ್ರೀತಿಯಿಂದ ನಿಮ್ಮ ಸಂಗಾತಿಯ ಮನವೊಲಿಸಲು ಪ್ರಯತ್ನಿಸಿದರೆ ಬಹಳಷ್ಟು ಪ್ರಯೋಜನವನ್ನು ಪಡೆಯಬಹುದು. ಸಮಸ್ಯೆ ಕೂಡ ಶಾಂತವಾಗಿ ಬಗೆಹರಿಯುತ್ತದೆ.
ಹಳೆ ವಿಚಾರ ಕೆದಕುವುದು
ಹಳೆಯ ವಿಚಾರಗಳನ್ನು ಕೆದಕುವುದು ಉಚಿತವಲ್ಲ. ಸಂಗಾತಿಯ ಹಿಂದಿನ ಬಗ್ಗೆ ನೀವು ತಮಾಷೆಯಾಗಿ ಮಾತನಾಡಿದರೆ ಕೋಪಕ್ಕೆ ಕಾರಣವಾಗಬಹುದು. ಆ ವಿಚಾರ ಕಿರಿಕಿರಿ ಉಂಟುಮಾಡಬಹುದು. ಕೆಲವೊಮ್ಮೆ ತಮಾಷೆಗಾಗಿ ನಾವು ನಮ್ಮ ಮಿತಿಗಳನ್ನು ದಾಟುತ್ತೇವೆ, ಈ ಮೂಲಕ ಸಂಗಾತಿಯ ಮನಸ್ಸು ನೋಯಿಸುತ್ತೇವೆ. ಹಾಗಾಗಿ ಅವರ ಗತಕಾಲದ ಬಗ್ಗೆ ಹೆಚ್ಚು ಮಾತನಾಡದಿರುವುದು ಉತ್ತಮ.
ಸಮಯ ನೀಡದೇ ಇರುವುದು
ಅನೇಕ ಬಾರಿ ಕಚೇರಿಯ ವ್ಯವಹಾರದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ, ಇದರಿಂದಾಗಿ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇದು ಕೂಡ ಜಗಳಕ್ಕೆ ಕಾರಣವಾಗುತ್ತದೆ. ಕೆಲಸದಿಂದ ಬಿಡುವು ಮಾಡಿಕೊಂಡು ಸಂಗಾತಿಗೆ ಸಮಯ ನೀಡಲು ಪ್ರಯತ್ನಿಸಿ. ಅವರೊಂದಿಗೆ ಪ್ರೀತಿಯಿಂದ ಮಾತನಾಡಿ. ವಾಕಿಂಗ್ ಕರೆದುಕೊಂಡು ಹೋಗಿ. ಈ ರೀತಿ ಸಣ್ಣ ಸಣ್ಣ ಖುಷಿಯನ್ನು ಹಂಚಿಕೊಂಡಾಗ ಮಾತ್ರ ಸಂಬಂಧ ಸಿಹಿಯಾಗಿರುತ್ತದೆ.