ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಆದ್ರೆ ಒಮ್ಮೊಮ್ಮೆ ದಂಪತಿ ಮಧ್ಯೆ ಆಗುವ ಜಗಳ ನೋಡಿದ್ರೆ ಜೋಡಿ ಸರಿಯಾಗಿ ಕೂಡಿಲ್ಲವೇನೋ ಎಂಬ ಅನುಮಾನ ಬರುವುದು ಸಹಜ. ಮದುವೆಗೆ ಮೊದಲು ಜಗಳ, ಕಲಹ ಕೊಂಚ ಕಡಿಮೆ. ಮದುವೆಯ ನಂತರವಂತೂ ದಂಪತಿ ಲೆಕ್ಕವಿಲ್ಲದಷ್ಟು ಕಿತ್ತಾಡಿಕೊಳ್ತಾರೆ. ಇದಕ್ಕೆ ಕಾರಣ ಏನು? ಜಗಳವಾಗದಂತೆ ತಡೆಯಲು ಏನು ಮಾಡಬೇಕು ಅನ್ನೋದನ್ನು ನೋಡೋಣ.
ಇಬ್ಬರು ಒಟ್ಟಿಗೆ ಬಾಳುವಾಗ ಸಣ್ಣ ಪುಟ್ಟ ಜಗಳ ಆಗುವುದು ಸಹಜ. ಸ್ವಲ್ಪ ಹೊತ್ತಿಗೆ ಮುನಿಸು ಕರಗಿ ಎಲ್ಲವೂ ಮೊದಲಿನಂತಾಗುತ್ತದೆ. ಆದ್ರೆ ಪದೇ ಪದೇ ಸಣ್ಣ ಪುಟ್ಟ ಕಾರಣಕ್ಕೆಲ್ಲ ಜಗಳ ತಾರಕಕ್ಕೇರ್ತಾ ಇದ್ರೆ ದಂಪತಿ ತಮ್ಮ ತಿಳುವಳಿಕೆಯನ್ನು ಬಳಸಿಕೊಂಡು ಅದಕ್ಕೆ ಫುಲ್ ಸ್ಟಾಪ್ ಇಡಬೇಕು. ನಿರಂತರ ಜಗಳದಿಂದಾಗಿ ದಂಪತಿ ಗುಣಮಟ್ಟದ ಸಮಯವನ್ನು ಜೊತೆಯಾಗಿ ಕಳೆಯಲು ಸಾಧ್ಯವಾಗುವುದಿಲ್ಲ.
ಈ ರೀತಿ ಜಗಳವಾಗಲು ಪ್ರಮುಖ ಕಾರಣವೆಂದರೆ ಪರಸ್ಪರ ತಿಳುವಳಿಕೆಯ ಕೊರತೆ. ದಂಪತಿಗಳಲ್ಲಿ ತಿಳುವಳಿಕೆ ಇದ್ದರೆ ಮಾತ್ರ ಸಂಬಂಧ ಚೆನ್ನಾಗಿರುತ್ತದೆ. ಇಬ್ಬರೂ ಬಾಲಿಶವಾಗಿ ವರ್ತಿಸಿದ್ರೆ ಕಲಹ ಹೆಚ್ಚಾಗುತ್ತದೆ. ಇಬ್ಬರ ಆಲೋಚನೆಗಳ ಘರ್ಷಣೆಯಿಂದಲೂ ಸಮಸ್ಯೆ ಬರಬಹುದು. ಜಗಳ ಮಾಡುವ ಬದಲು ಪ್ರೀತಿಯಿಂದ ಸಂಗಾತಿಯ ಮನವೊಲಿಸಲು ಪ್ರಯತ್ನಿಸಿ. ಹಳೆಯ ವಿಚಾರಗಳನ್ನು ಸುಖಾಸುಮ್ಮನೆ ಕೆದಕಿದಾಗ ಜಗಳ ಸಾಮಾನ್ಯ.
ಸಂಗಾತಿಯ ಬಗ್ಗೆ ಟೀಕೆ ಮಾಡುವುದು, ಹಳೆ ವಿಷಯವನ್ನಿಟ್ಟುಕೊಂಡು ತಮಾಷೆ ಮಾಡುವುದು ಮಾಡಬೇಡಿ. ಇದರಿಂದ ಅವರು ಕೋಪಗೊಂಡು ಜಗಳ ಮಾಡಬಹುದು. ಎಷ್ಟೋ ಸಲ ಜೋಕ್ ಮಾಡುತ್ತ ಮಾಡುತ್ತ ನಮ್ಮ ಮಿತಿಯನ್ನು ದಾಟಿಬಿಡುತ್ತೇವೆ. ಸಂಗಾತಿಯ ಮನಸ್ಸನ್ನು ನೋಯಿಸುತ್ತೇವೆ. ಹಾಗಾಗಿ ಹಳೆ ವಿಷಯಗಳ ಬಗ್ಗೆ ಜಾಸ್ತಿ ಚರ್ಚೆ ಬೇಡ. ಕಚೇರಿ ಕೆಲಸದಲ್ಲಿ ನಾವು ಬ್ಯುಸಿಯಾಗಿಬಿಡುತ್ತೇವೆ.
ಸಂಗಾತಿಯ ಬೇಕು ಬೇಡಗಳನ್ನು ಗಮನಿಸಲು ಸಮಯವಿರುವುದಿಲ್ಲ. ಇದು ಕೂಡ ಜಗಳಕ್ಕೆ ಪ್ರಮುಖ ಕಾರಣ. ಸಂಗಾತಿಯ ಜೊತೆಗೆ ಸಮಯ ಕಳೆಯಲು ಪ್ರಯತ್ನಿಸಿ. ಪರಸ್ಪರ ಮಾತುಕತೆಯ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಬಹುದು. ಜೊತೆಯಾಗಿ ವಾಕ್ ಮಾಡುತ್ತ ಹರಟಿದರೆ ಬೇಸರವೆಲ್ಲ ಮರೆಯಾಗುತ್ತದೆ.