ಕೋಲಾರ ಜಿಲ್ಲೆ, ಉಳ್ಳೇರಹಳ್ಳಿಯಲ್ಲಿ ದಲಿತ ಬಾಲಕ ದೇವರ ಕೋಲು ಮುಟ್ಟಿದ ಎಂಬ ಕಾರಣಕ್ಕೆ ದಂಡ ವಿಧಿಸಿದ ಘಟನೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದ್ದು, ಆ ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದರು.
ಇದೀಗ ಶನಿವಾರದಂದು ಉಳ್ಳೇರಹಳ್ಳಿಗೆ ಭೇಟಿ ನೀಡಿ ಸಂತ್ರಸ್ತ ಬಾಲಕನ ಕುಟುಂಬವನ್ನು ಭೇಟಿಯಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್. ಧರ್ಮಸೇನಾ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದಿಂದ ದಂಡ ಕಟ್ಟಲು ನಾವು ಸಿದ್ಧವಿದ್ದು, ಆದರೆ ಬಳಿಕ ದಲಿತರಿಗೆ ದೇವರನ್ನು ಮುಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಸವಾಲು ಹಾಕಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.