ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸುವುದು ಸಾಮಾನ್ಯ ಸಂಗತಿ. ಆದರೆ ಟೋಲ್ ಪಾವತಿ ಮಾಡಿದರೂ ಸಹ ರಸ್ತೆಗಳ ಗುಣಮಟ್ಟ ಸರಿ ಇರುವುದಿಲ್ಲ ಎಂಬ ಆರೋಪ ವಾಹನ ಸವಾರರಿಂದ ಪದೇ ಪದೇ ಕೇಳಿ ಬರುತ್ತಿರುತ್ತದೆ. ಅಲ್ಲದೆ ಅತಿ ಹೆಚ್ಚು ಶುಲ್ಕ ಪಡೆಯಲಾಗುತ್ತದೆ ಎಂಬ ಮಾತುಗಳು ಸಹ ಕೇಳಿಬರುತ್ತದೆ.
ಇದರ ಮಧ್ಯೆ ಕಳೆದ ಐದು ವರ್ಷಗಳಲ್ಲಿ ಅಂದರೆ 2018ರ ಏಪ್ರಿಲ್ ನಿಂದ 2022ರ ಡಿಸೆಂಬರ್ ವರೆಗೆ ಸಂಗ್ರಹವಾಗಿರುವ ಟೋಲ್ ಶುಲ್ಕ ದಂಗಾಗಿಸುವಂತಿದೆ. ಈ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದ್ದರೆ ಈ ಪೈಕಿ ಕರ್ನಾಟಕದ ಪಾಲು ಸರಿಸುಮಾರು 10,000 ಕೋಟಿ ರೂಪಾಯಿಗಳಾಗಿದೆ.
ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಟೋಲ್ ಸಂಗ್ರಹದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಐದು ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 17,242.9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 16,565.9 ಕೋಟಿ ರೂಪಾಯಿ, ಮೂರನೇ ಸ್ಥಾನದಲ್ಲಿರುವ ಗುಜರಾತಿನಲ್ಲಿ 15,332.2 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಟೋಲ್ ಸಂಗ್ರಹಣೆಯಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದ್ದು ಐದು ವರ್ಷಗಳ ಅವಧಿಯಲ್ಲಿ ಒಟ್ಟು 9,982.6 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಪೈಕಿ 2018-19 ರಲ್ಲಿ 1,830.1 ಕೋಟಿ ರೂಪಾಯಿ, 2019-20 ರಲ್ಲಿ 1,814.3 ಕೋಟಿ ರೂಪಾಯಿ, 2020-21 ರಲ್ಲಿ 1,800.1 ಕೋಟಿ ರೂಪಾಯಿ, 2021-22 ರಲ್ಲಿ 2,269.2 ಕೋಟಿ ರೂಪಾಯಿ ಹಾಗೂ 2022-23 ರಲ್ಲಿ 2,268.9 ಕೋಟಿ ರೂಪಾಯಿ ಸಂಗ್ರಹವಾಗಿದೆ.