ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೆ ಏನು ಸಾರು ಮಾಡುವುದು ಎಂದು ಗೊತ್ತಾಗುವುದಿಲ್ಲ. ದಿನಾ ತೆಂಗಿನಕಾಯಿ ರುಬ್ಬಿ ಮಾಡುವ ಸಾರು ಕೂಡ ಬೇಜಾರು ಬಂದಿರುತ್ತದೆ. ಒಂದು ಕಪ್ ಹುಳಿ ಮೊಸರು ಇದ್ದರೆ ಸಾಕು ಯಾವುದೇ ತರಕಾರಿ ಇಲ್ಲದೇ ಇದ್ರೂ ರುಚಿಕರವಾದ ಸಾರು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು.
ಬೇಕಾಗುವ ಸಾಮಾಗ್ರಿ:
ಒಂದು ಕಪ್- ಹುಳಿ ಮೊಸರು, ನೀರು-ಅರ್ಧ ಕಪ್, ಅರಿಶಿನ-1 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು. ಕೊತ್ತಂಬರಿ ಬೀಜ- 1 ಟೇಬಲ್ ಸ್ಪೂನ್, ತೊಗರಿ ಬೇಳೆ-1 ಟೇಬಲ್ ಸ್ಪೂನ್, ಕಾಳುಮೆಣಸು-1ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಇನ್ನು ಒಗ್ಗರಣೆಗೆ: ಎಣ್ಣೆ-1 ಟೀ ಸ್ಪೂನ್, ಸಾಸಿವೆ-1 ಟೀ ಸ್ಪೂನ್, ಜೀರಿಗೆ ½ ಟೀ ಸ್ಪೂನ್, ಇಂಗು-ಚಿಟಿಕೆ, ಒಣಮೆಣಸು-1, ಕರಿಬೇವು-5 ಎಸಳು.
ಮಾಡುವ ವಿಧಾನ:
ಮೊದಲಿಗೆ ಕೊತ್ತಂಬರಿ ಬೀಜ, ಕಾಳುಮೆಣಸು, ಜೀರಿಗೆ, ತೊಗರಿ ಬೇಳೆಯನ್ನು ಒಂದು ಪ್ಯಾನ್ ಗೆ ಹಾಕಿ ಹುರಿದುಕೊಳ್ಳಿ.ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಗೆ ಈ ಮೊಸರನ್ನು ಹಾಕಿ ಅದಕ್ಕೆ ನೀರು, ಅರಿಶಿನ, ಉಪ್ಪು, ಪುಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ, ಅದಕ್ಕೆ ಸಾಸಿವೆ, ಇಂಗು, ಕರಿಬೇವು, ಒಣಮೆಣಸು, ಜೀರಿಗೆ ಹಾಕಿ ಮಿಶ್ರಣ ಮಾಡಿ. ನಂತರ ಇದನ್ನು ಮಜ್ಜಿಗೆಗೆ ಹಾಕಿ ಸ್ವಲ್ಪ ಹೊತ್ತು ಕುದಿಸಿದರೆ ರುಚಿಕರವಾದ ಮಜ್ಜಿಗೆ ಸಾರು ಸವಿಯಲು ಸಿದ್ಧ.