ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಸುಲಭವಾಗಿ ಮಾಡಿಕೊಂಡು ತಿನ್ನಬಹುದಾದದ್ದು ಎಂದರೆ ಅದು ಶಿರಾ. ಬಾಳೆ ಹಣ್ಣು ಬಳಸಿ ಶಿರಾ ಮಾಡುವ ವಿಧಾನ ಇಲ್ಲಿದೆ ಒಮ್ಮೆ ನೀವು ಮನೆಯಲ್ಲಿ ಪ್ರಯತ್ನಿಸಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ರವೆ, 2 ಕಪ್ – ನೀರು, 1 ಕಪ್ – ಕತ್ತರಿಸಿಟ್ಟುಕೊಂಡ ಬಾಳೆಹಣ್ಣು, ¾ ಕಪ್ ಸಕ್ಕರೆ, 3 – ಏಲಕ್ಕಿ, 3 ಟೇಬಲ್ ಸ್ಪೂನ್ – ತುಪ್ಪ, 8 – ಗೋಡಂಬಿ, 8 – ದ್ರಾಕ್ಷಿ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದು ಎತ್ತಿಟ್ಟುಕೊಳ್ಳಿ.
ನಂತರ ಅದೇ ಪ್ಯಾನ್ ಗೆ ರವೆ ಹಾಕಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ 2 ಕಪ್ ನೀರನ್ನು ಬಿಸಿ ಮಾಡಿಕೊಂಡು ಅದನ್ನು ರವೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನೀರೆಲ್ಲಾ ಇಂಗಿದ ಮೇಲೆ ಇದಕ್ಕೆ ಸಕ್ಕರೆ, ಬಾಳೆಹಣ್ಣು, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮೇಲುಗಡೆ 1 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.