ಹಬ್ಬ ಹರಿದಿನಗಳು ಬಂತೆಂದರೆ ಗಡಿಬಿಡಿ ಜಾಸ್ತಿ. ಮನೆಯಲ್ಲೆ ಎಲ್ಲರೂ ಒಟ್ಟು ಸೇರುವುದರಿಂದ ಅಡುಗೆ ಕೆಲಸ ಹೆಚ್ಚು ಇರುತ್ತದೆ. ಇಲ್ಲಿ ಸುಲಭವಾಗಿ ಜತೆಗೆ ಬೇಗನೆ ಆಗಿಬಿಡುವಂತಹ ರಸಂ ಇದೆ. ಬಿಸಿ ಬಿಸಿ ಅನ್ನಕ್ಕೆ ಹಾಕಿಕೊಂಡು ಊಟ ಮಾಡಿದರೆ ಮತ್ತಷ್ಟೂ ಅನ್ನ ಹೊಟ್ಟೆಗೆ ಇಳಿಯುತ್ತದೆ.
ಬೇಕಾಗುವ ಸಾಮಗ್ರಿಗಳು:
ಟೊಮೆಟೊ – 2, ಜೀರಿಗೆ – 1 ಟೀ ಸ್ಪೂನ್, ಕಾಳುಮೆಣಸು – 15 ಕಾಳು, ¼ ಟೀ ಸ್ಪೂನ್ – ಅರಿಶಿನ ಪುಡಿ, ಸಾಸಿವೆ – 1/4 ಟೀ ಸ್ಪೂನ್, 1 ½ ಟೀ ಸ್ಪೂನ್ ಎಣ್ಣೆ, 8 ಎಸಳು ಬೆಳ್ಳುಳ್ಳಿ, ಇಂಗು – ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಹಸಿಮೆಣಸು – 1, ಕರಿಬೇವು – ಸ್ವಲ್ಪ, ಕೊತ್ತಂಬರಿಸೊಪ್ಪು – ಸ್ವಲ್ಪ, ಹುಣಸೆ ಹಣ್ಣು – ನೆಲ್ಲಿಕಾಯಿ ಗಾತ್ರದ್ದು ನೆನೆಸಿಟ್ಟುಕೊಳ್ಳಿ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಕಾಳುಮೆಣಸು, ಜೀರಿಗೆ ಹಾಕಿ ಸ್ವಲ್ಪ ಹುರಿದುಕೊಳ್ಳಿ. ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ನೆನೆಸಿಟ್ಟುಕೊಂಡ ಹುಣಸೆಹಣ್ಣಿನ ರಸ, ಕತ್ತರಿಸಿದ ಟೊಮೆಟೊ ಹಾಕಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಸಾಸಿವೆ, ಚಿಟಿಕೆ ಜೀರಿಗೆ ಹಸಿಮೆಣಸು, ಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಕೈಯಾಡಿಸಿ, ನಂತರ ರುಬ್ಬಿದ ಮಿಶ್ರಣ ಹಾಕಿ ನಿಮಗೆ ಎಷ್ಟು ಬೇಕೋ ಅಷ್ಟು ನೀರು ಸೇರಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ 1 ಕುದಿ ಕುದಿಸಿಕೊಳ್ಳಿ. ನಂತರ ಕೊತ್ತಂಬರಿಸೊಪ್ಪು ಚಿಟಿಕೆ ಇಂಗು ಹಾಕಿ ಸ್ವಲ್ಪ ಕುದಿಸಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ