ಕೊಬ್ಬು ಎಂಬ ಕಾರಣಕ್ಕೆ ಹಾಲಿನ ಕೆನೆಯನ್ನು ಬಳಸದೆ ಹಾಗೇ ಎಸೆಯುತ್ತೀರಾ, ಇದರಿಂದ ತ್ವಚೆಗೆ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದರೆ ನೀವೀ ತಪ್ಪು ಮಾಡುವುದಿಲ್ಲ.
ಮೊಡವೆಗಳನ್ನು, ಮೊಡವೆ ಕಲೆಗಳನ್ನು, ಮುಖದ ಮೇಲೆ ಮೂಡುವ ಗುಳ್ಳೆಗಳನ್ನು ನಿವಾರಿಸಲು ಹಾಲಿನ ಕೆನೆ ಅತ್ಯುತ್ತಮ ಔಷಧ. ಕೆನೆಗೆ ಒಂದು ಚಮಚ ಶ್ರೀಗಂಧದ ಪುಡಿ, ಕಡಲೆಹಿಟ್ಟು, ಅರಶಿನ ಮತ್ತು ರೋಸ್ ಎಸೆನ್ಸ್ ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ.
ಹತ್ತು ನಿಮಿಷ ಬಳಿಕ ಮುಖ ತೊಳೆಯಿರಿ. ವಾರಕ್ಕೆ ಎರಡರಿಂದ ಮೂರು ಬಾರಿ ಇದನ್ನು ಪುನರಾವರ್ತಿಸಿ. ಇದರಿಂದ ಒಣಗಿದ ತ್ವಚೆಯ ಸಮಸ್ಯೆಯೂ ದೂರವಾಗುತ್ತದೆ. ತ್ವಚೆ ಬೆಳ್ಳಗಾಗ ಬೇಕಿದ್ದರೆ ಅದಕ್ಕೆ ಚಿಟಿಕೆ ಕೇಸರಿ ಮತ್ತು ಜೇನುತುಪ್ಪ ಸೇರಿಸಿ ಹಚ್ಚಿ.
ನಿಮ್ಮ ಮುಖದಲ್ಲಿ ಎಣ್ಣೆಯಂಶ ಹೆಚ್ಚಿದ್ದರೆ ಸೌತೆಕಾಯಿ ತುರಿದು ಅದಕ್ಕೆ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ತ್ವಚೆ ತೈಲಮುಕ್ತವಾಗುತ್ತದೆ ಮಾತ್ರವಲ್ಲ ಮೊಡವೆಯ ಕಲೆಗಳೂ ಮಾಯವಾಗುತ್ತವೆ.