ದೇಶದಲ್ಲಿನ ಪಂಚ ರಾಜ್ಯಗಳಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದತ್ತ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ತಂತ್ರ- ಪ್ರತಿ ತಂತ್ರಗಳು ಈ ರಾಜ್ಯದಲ್ಲಿ ಜೋರಾಗಿ ನಡೆಯುತ್ತಿವೆ.
ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್, ಬಿ ಎಸ್ ಪಿ ಸೇರಿದಂತೆ ಇನ್ನುಳಿದ ಪಕ್ಷಗಳು ಶತಾಯಗತಾಯ ಪ್ರಯತ್ನಿಸುತ್ತಿವೆ.
ಪಕ್ಷಾಂತರ ಪರ್ವ ಸದ್ಯ ಈ ರಾಜ್ಯದಲ್ಲಿಯೂ ಸಾಮಾನ್ಯವಾಗಿದೆ. ಚುನಾವಣೆಯ ಹೊಸ್ತಿಲಿನಲ್ಲಿ ಇದು ಸ್ವಲ್ಪ ಜಾಸ್ತಿ ಎನ್ನುವಂತಾಗಿದೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಷ್ಟರಲ್ಲಿಯೇ ಸಮೀಕ್ಷೆಗಳ ಆಧಾರದ ಮೇಲೆಯೋ? ಅಥವಾ ಈ ಬಾರಿಯೂ ಬಿಜೆಪಿಗೆ ಜನ ಬೆಂಬಲ ಸೂಚಿಸಿತ್ತಾರೆ ಎಂಬ ಕಾರಣಕ್ಕೊ? ಹಲವು ಪಕ್ಷಗಳ ನಾಯಕರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.
ಸದ್ಯ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ತಲಾಖ್ ಸಂತ್ರಸ್ತೆ ನಿದಾ ಖಾನ್ ಬಿಜೆಪಿ ಸೇರಿದ್ದಾರೆ. ನಿದಾ ಖಾನ್ ಅವರು ತ್ರಿವಳಿ ತಲಾಖ್ ನ ಸಂತ್ರಸ್ತೆಯಾಗಿದ್ದರು. ತ್ರಿವಳಿ ತಲಾಖ್ ವಿರೋಧಿಸಿ ಹಲವಾರು ಹೋರಾಟಗಳನ್ನು ಮಾಡಿದ್ದರು. ಅವರು ತ್ರಿವಳಿ ತಲಾಖ್ ನಿಂದ ವಿಚ್ಛೇದನ ಪಡೆದಿದ್ದ ಮಹಿಳೆಯರು ಕಾನೂನು ಹೋರಾಟ ಮಾಡುವಂತೆ ಪ್ರೇರೇಪಿಸಿ ಸಹಾಯ ಮಾಡುವ ಕಾರ್ಯ ಮಾಡುತ್ತಿದ್ದಾರೆ.
ನಿದಾ ಖಾನ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರಿಗೆ ಹೆಚ್ಚು ಹತ್ತಿರವಾಗಿದ್ದರು. ಹೀಗಾಗಿ ಕಾಂಗ್ರೆಸ್ ಸೇರುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಉತ್ತರ ಪ್ರದೇಶದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅವರು ಪಕ್ಷ ಸೇರಿದ್ದಾರೆ. ಬಿಜೆಪಿ ಸಿದ್ಧಾಂತ ಹಾಗೂ ತತ್ವಗಳನ್ನು ಮೆಚ್ಚಿ ನಾನು ಪಕ್ಷ ಸೇರಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ, ಬಿಜೆಪಿ ಪಕ್ಷಕ್ಕೆ ಮುಸ್ಲಿಂರು ಬಹಿರಂಗವಾಗಿ ಮತ ಚಲಾಯಿಸುತ್ತಾರೆ ಎಂದು ಅವರು ಹೇಳಿದ್ದಾರೆ.