ಕೊಯಮತ್ತೂರು: ತಮಿಳುನಾಡು ರಾಜ್ಯದ ಕೊಯಮತ್ತೂರು ನಗರ ಪಂಚಾಯತ್‌ನ ನಿವಾಸಿಗಳಿಗೆ ಗುಡ್ ನ್ಯೂಸ್ ಒಂದಿದೆ. ಅದೇನೆಂದ್ರೆ ತ್ಯಾಜ್ಯ ವಿಂಗಡಣೆಯನ್ನು ಕೈಗೊಂಡರೆ ಊಟಿಗೆ ಒಂದು ದಿನದ ಉಚಿತ ಪ್ರಯಾಣ ಮಾಡಬಹುದು.
ಕೊಯಮತ್ತೂರು ಜಿಲ್ಲೆಯ ಅಣ್ಣೂರು ನಗರ ಪಂಚಾಯತ್‌ನ ಕೌನ್ಸಿಲರ್ ತನ್ನ ವಾರ್ಡ್‌ನ ಜನರು ತ್ಯಾಜ್ಯ ವಿಂಗಡಣೆಯನ್ನು ಕೈಗೊಳ್ಳುವಂತೆ ಮನೆ-ಮನೆಗೆ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಪ್ರತಿಯಾಗಿ, ಅವರು ಕರ್ತವ್ಯ ಮುಗಿದ ಮೇಲೆ ಊಟಿಗೆ ವಿಸಿಟ್ ಮಾಡಬಹುದು.
ಅಣ್ಣೂರು ಪುರಸಭೆ ವ್ಯಾಪ್ತಿಯಲ್ಲಿ 15 ವಾರ್ಡ್‌ಗಳಿವೆ. ಇಲ್ಲಿಯವರೆಗೂ ಈ ಪ್ರದೇಶದಲ್ಲಿ ಪ್ರತ್ಯೇಕ ಹೂಳೆತ್ತುವ ಜಾಗವೇ ಇಲ್ಲ ಎನ್ನುವಂತಾಗಿದೆ. ಈ ಕಾರಣದಿಂದ ಪ್ರತಿನಿತ್ಯ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡಲು ನೈರ್ಮಲ್ಯ ನೌಕರರು ಪರದಾಡುವಂತಾಗಿದೆ.
ಈ ನಿಟ್ಟಿನಲ್ಲಿ ಅಣ್ಣೂರು ಪುರಸಭೆಯ 12ನೇ ವಾರ್ಡ್‌ನ ಕೌನ್ಸಿಲರ್ ರಂಗನಾಥನ್ ಅವರು ಹೊಚ್ಚ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಹಸಿ ತ್ಯಾಜ್ಯ, ಒಣ ತ್ಯಾಜ್ಯವನ್ನು ವರ್ಗೀಕರಿಸುವಂತೆ ನಿವಾಸಿಗಳಿಗೆ ಕರಪತ್ರಗಳನ್ನು ಹಂಚಿ, ಜಾಗೃತಿ ಮೂಡಿಸುತ್ತಿದ್ದಾರೆ.
ತ್ಯಾಜ್ಯ ವಿಂಗಡಣೆಯನ್ನು ಅನುಸರಿಸುವವರಿಗೆ ಲಾಟರಿ ಮೂಲಕ ವಾರ್ಡ್‌ನಿಂದ 50 ವ್ಯಕ್ತಿಗಳನ್ನು ಆಯ್ಕೆ ಮಾಡಿದ ನಂತರ, ಜೂನ್ 5 ರಂದು ಊಟಿಗೆ ಭೇಟಿ ನೀಡಬಹುದಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ರಂಗನಾಥನ್ ಅವರೇ ಭರಿಸುತ್ತಾರೆ.
ಇನ್ನು ವಾರ್ಡ್ ಕೌನ್ಸಿಲರ್ ರಂಗನಾಥನ್ ಮನೆ ಮನೆಗೆ ತೆರಳಿ ಸಾರ್ವಜನಿಕರು ತಮ್ಮ ಪ್ರಯತ್ನಕ್ಕೆ ಸಹಕರಿಸುವಂತೆ ವಿನಂತಿಸಿದ್ದಾರೆ.