ಬೆಂಗಳೂರಿನ ತೋಟಗಾರಿಕಾ ಇಲಾಖೆಯ ಮಹಿಳಾ ಸಿಬ್ಬಂದಿ, ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಇಂದು ಮಹಿಳಾ ಆಯೋಗದ ಅಧ್ಯಕ್ಷೆ ಹಾಗೂ ಅವರ ಟೀಂ ಲಾಲ್‌ಬಾಗ್ ಗೆ ಭೇಟಿ ನೀಡಿ ಸಭೆ ನಡೆಸಿದೆ.
ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿ ಮಾನಸಿಕ ಹಾಗೂ ದೈಹಿಕ ದೌರ್ಜನ್ಯದ ಆರೋಪ ನೀಡಿದ್ದಾರೆ. ಲಾಲ್‌ಬಾಗ್ ಅಪರ ನಿರ್ದೇಶಕ ಎನ್ ಚಂದ್ರಶೇಖರ್ ಅವರ ಬಗ್ಗೆ ದೂರು ನೀಡಿರುವ ಸಿಬ್ಬಂದಿ, ಅವರಿಂದ ದೌರ್ಜನ್ಯ ಆಗ್ತಿದೆ ಎಂದು ಆರೋಪಿಸಿದ್ದಾರೆ.
ಚಂದ್ರಶೇಖರ್ ಅವರು ಒಂದಲ್ಲಾ ಒಂದು ತಗಾದೆ ತೆಗೆದು ಮಾನಸಿಕ ಕಿರುಕುಳ ನೀಡುತ್ತಾರೆ. ನಿರಂತರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಕೊಠಡಿಗೆ ಕರೆಸಿ ಮೈ-ಕೈ ಮುಟ್ಟುವುದು, ವೈಯಕ್ತಿಕ ವಿಚಾರ ಕೆದಕುವುದು, ಕಾರಣವಿಲ್ಲದೇ ಅರಚುವುದು ಮಾಡುತ್ತಾರೆ. ರಜೆ ಕೇಳಿದ್ರು, ಕೊಡದೆ ಹಿಂಸೆ ನೀಡುತ್ತಾರೆಂದು ಲಾಲ್‌ಬಾಗ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 10ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಹೀಗಾಗಿ ಲಾಲ್ ಬಾಗ್ ಅಧಿಕಾರಿಗಳು ಹಾಗೂ ತೋಟಗಾರಿಕೆ ನಿರ್ದೇಶಕರೊಂದಿಗೆ ಅಧ್ಯಕ್ಷೆ ಪ್ರಮಿಳಾ ನಾಯ್ಡು ಸಭೆ ನಡೆಸಿದ್ದಾರೆ. ಇನ್ನು ಸಭೆಯಲ್ಲಿ ಸಿಬ್ಬಂದಿಗಳ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಯತ್ನಿಸುತ್ತೇನೆ ಎಂದು ಅಧ್ಯಕ್ಷೆ ನಾಯ್ಡು ತಿಳಿಸಿದ್ದಾರೆ.