ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿರೋ ವಾಹನ ಸವಾರರಿಗೆ NICE ಸಂಸ್ಥೆ ಗಾಯದ ಮೇಲೆ ಬರೆ ಹಾಕ್ತಾ ಇದೆ. ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE) ಬೆಂಗಳೂರಲ್ಲಿ ಎಲ್ಲಾ ವಾಹನಗಳಿಗೆ ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಜುಲೈ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ವೆಚ್ಚ ಹೆಚ್ಚಳವಾಗಿರೋದ್ರಿಂದ ಟೋಲ್ ಶುಲ್ಕವನ್ನು ಏರಿಕೆ ಮಾಡಿರುವುದಾಗಿ ನೈಸ್ ಸಂಸ್ಥೆ ಸಮರ್ಥಿಸಿಕೊಂಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದೆ. ಟೋಲ್ ರಿಯಾಯಿತಿ ಒಪ್ಪಂದದ ಪ್ರಕಾರ ಪ್ರತಿ ವರ್ಷ ದರ ಪರಿಷ್ಕರಣೆಗೆ ಅವಕಾಶವಿದೆ.
ಆದ್ರೆ ಐದು ವರ್ಷಗಳ ಬಳಿಕ ಟೋಲ್ ದರವನ್ನು ಏರಿಕೆ ಮಾಡಿರುವುದಾಗಿ ನೈಸ್ ಹೇಳಿಕೊಂಡಿದೆ. ವಿಶ್ವದರ್ಜೆಯ ಮೂಲಸೌಕರ್ಯವನ್ನು ಕಾಪಾಡಿಕೊಳ್ಳಲು ಮತ್ತು ವೆಚ್ಚಗಳನ್ನು ಪೂರೈಸಲು ಟೋಲ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಪರಿಷ್ಕೃತ ದರವನ್ನು ಕಾರುಗಳಿಗೆ 35 ರೂಪಾಯಿ ಹಾಗೂ ದ್ವಿಚಕ್ರ ವಾಹನಗಳಿಗೆ 12 ರೂಪಾಯಿ ಟೋಲ್‌ನಿಗದಿ ಮಾಡಲಾಗಿದೆ. ಕನಕಪುರ ರಸ್ತೆಯಿಂದ ಕ್ಲೋವರ್ ಲೀಫ್ ಗೆ ಕಾರುಗಳಿಗೆ 25 ರೂಪಾಯಿ ಮತ್ತು ದ್ವಿಚಕ್ರ ವಾಹನಕ್ಕೆ 8 ರೂಪಾಯಿ ಟೋಲ್ ನಿಗದಿಪಡಿಸಲಾಗಿದೆ.
ಕ್ಲೋವರ್ ಲೀಫ್ನಿಂದ ಮೈಸೂರಿನವರೆಗೆ ಕಾರುಗಳಿಗೆ 20 ರೂಪಾಯಿ ಮತ್ತು ದ್ವಿಚಕ್ರ ವಾಹನಕ್ಕೆ 8 ರೂಪಾಯಿ ಶುಲ್ಕ ವಿಧಿಸಲಾಗ್ತಿದೆ. ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ತಲಾ 45 ಹಾಗೂ 20 ರೂಪಾಯಿ, ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ಪ್ರಯಾಣಿಸಲು ಕಾರುಗಳಿಗೆ 40 ರೂಪಾಯಿ, ದ್ವಿಚಕ್ರ ವಾಹನಗಳಿಗೆ 12 ರೂಪಾಯಿ ಮತ್ತು ಲಿಂಕ್ ರಸ್ತೆಯಲ್ಲಿ ಪ್ರಯಾಣಿಸಲು ಕಾರುಗಳು 50 ರೂಪಾಯಿ ಹಾಗೂ ದ್ವಿಚಕ್ರ ವಾಹನಗಳು 18 ರೂಪಾಯಿ ಟೋಲ್ ಭರಿಸಬೇಕು. ಉಳಿದಂತೆ ಬಸ್, ಟ್ರಕ್, ಲಘು ವಾಣಿಜ್ಯ ಮತ್ತು ಮಲ್ಟಿ-ಆಕ್ಸಲ್ ವಾಹನಗಳ ಟೋಲ್ ದರವನ್ನು ಸಹ ಪರಿಷ್ಕರಿಸಲಾಗಿದೆ.