ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಬೆಂಬಲಕ್ಕೆ ನಟಿ ಕಂಗನಾ ರಣಾವತ್ ನಿಂತಿದ್ದಾರೆ.
ಬಾಲಿವುಡ್ ಗೆ ತನ್ನನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬ ಮಹೇಶ್ ಬಾಬು ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೊತೆಗೆ ಸ್ವಲ್ಪ ವಿವಾದವೂ ಉಂಟಾಗಿತ್ತು. ಇವರ ಪರ ನಿಂತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಸತ್ಯ ಹೇಳುತ್ತಿದ್ದಾರೆ ಎಂದಿದ್ದಾರೆ.
ಹೈದಾರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಹೇಶ್ ಬಾಬು, ತನ್ನ ಮಾತು ನಿಮಗೆಲ್ಲಾ ಸೊಕ್ಕಿನಂತೆ ತೋರಬಹುದು. ಆದರೆ, ತನಗೆ ಹಿಂದಿಯಲ್ಲಿ ಸಾಕಷ್ಟು ಆಫರ್‌ಗಳು ಬಂದಿದ್ದವು. ಆದರೆ, ಅವರಿಗೆ ನನ್ನನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ತನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ತೆಲುಗು ಚಿತ್ರರಂಗದಲ್ಲಿ ನನಗಿರುವ ಸ್ಟಾರ್‌ಡಮ್ ಮತ್ತು ಪ್ರೀತಿಯಿಂದ ತಾನು ಬೇರೆ ಇಂಡಸ್ಟ್ರಿಗೆ ಹೋಗುವ ಬಗ್ಗೆ ಯೋಚಿಸಿಯೇ ಇಲ್ಲ ಎಂದು ಹೇಳಿದ್ದರು. ಅಲ್ಲದೆ, ತಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಆದರೆ, ತೆಲುಗು ಚಿತ್ರರಂಗದಲ್ಲಿ ತಾನು ಸಂತೋಷವಾಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ನಟ ಮಹೇಶ್ ಬಾಬು ಹೇಳಿಕೆ ವೈರಲ್ ಆಗುತ್ತಿದ್ದಂತೆ, ವ್ಯಾಪಕ ಟೀಕೆಗೆ ಗುರಿಯಾಯಿತು. ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ನಟಿ ಕಂಗನಾ ರಣಾವತ್, ನಟ ತಮ್ಮ ಉದ್ಯಮದ ಬಗ್ಗೆ ಗೌರವ ತೋರಿಸಿದ್ದಾರೆ. ಅವರ ಹೇಳಿಕೆಯನ್ನು ವಿವಾದವಾಗಿ ಪರಿವರ್ತಿಸಬಾರದು. ತೆಲುಗು ಉದ್ಯಮವನ್ನು ಭಾರತದಲ್ಲಿ ನಂಬರ್ ಒನ್ ಚಿತ್ರೋದ್ಯಮವನ್ನಾಗಿ ಮಾಡಿದ್ದಾರೆ. ಈಗ, ಬಾಲಿವುಡ್ ಖಂಡಿತವಾಗಿಯೂ ಅವರನ್ನು ಪಡೆಯಲು ಸಾಧ್ಯವಿಲ್ಲ. ಇದನ್ನು ಏಕೆ ದೊಡ್ಡ ವಿವಾದಕ್ಕೆ ಒಳಪಡಿಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಂಗನಾ ತಿಳಿಸಿದ್ದಾರೆ.