ಮಳಿಗೆಗಳಲ್ಲಿ ಸಿಗುವ ಸನ್ ಫ್ಲವರ್ ಪ್ಯಾಕೆಟ್ ಆಯಿಲ್ ಗಳಿಂತಲೂ ಶುದ್ಧ ಕೊಬ್ಬರಿ ಎಣ್ಣೆ ಒಳ್ಳೆಯದು ಎಂಬುದು ಸತತ ಅಧ್ಯಯನಗಳಿಂದ ಸಾಬೀತಾಗಿದೆ.
ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಬೇಕಾದ ಅಂಶವೇ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.
ತ್ವಚೆಗೂ, ಕೂದಲಿಗೂ, ಆರೋಗ್ಯ ವೃದ್ಧಿಗೂ ನೆರವಾಗುವ ಕೊಬ್ಬರಿ ಎಣ್ಣೆಯಲ್ಲಿ ನಿಮಗೆ ತಿಳಿದಿರದ ಇನ್ನೂ ಹಲವು ಪ್ರಯೋಜನಗಳಿವೆ. ಯಕ್ಷಗಾನ ಅಥವಾ ಭರತನಾಟ್ಯದ ಕಾರಣಕ್ಕೆ ನೀವು ಮುಖದ ತುಂಬಾ ಹಾಕಿಕೊಂಡ ಮೇಕಪ್ ಅಥವಾ ಬಣ್ಣವನ್ನು ತೆಗೆಯಲು ಇದಕ್ಕಿಂದ ಉತ್ತಮವಾದ ವಸ್ತು ಬೇರೊಂದಿಲ್ಲ ಎನ್ನಬಹುದು. ಇದು ತ್ವಚೆಗೆ ಯಾವುದೇ ಹಾನಿ ಉಂಟುಮಾಡದೆ, ನೋವು ನೀಡದೆ ಹಚ್ಚಿದ ಬಣ್ಣವನ್ನು ತೆಗೆಯಲು ಸಹಾಯ ಮಾಡುತ್ತದೆ.
ಆಯುರ್ವೇದದ ಪ್ರಕಾರ ಬಾಯಿಗೆ ತೆಂಗಿನೆಣ್ಣೆ ಹಾಕಿ ಐದು ನಿಮಿಷ ಬಾಯಿ ಮುಕ್ಕಳಿಸಿ ಬಳಿಕ ಉಗಿಯುವುದರಿಂದ ಬಾಯಿಯ ದುರ್ವಾಸನೆ ಸೇರಿ ಹಲ್ಲಿನ ಹಲವು ಸಮಸ್ಯೆಗಳು ದೂರವಾಗುತ್ತವೆ. ಹಳದಿ ಹಲ್ಲಿನ ಸಮಸ್ಯೆ ನಿವಾರಿಸಿ ಬಿಳಿ ಹಲ್ಲನ್ನು ನಿಮ್ಮದಾಗಿಸುತ್ತದೆ.
ಸ್ನಾನಕ್ಕೆ ಮುಂಚೆ ಮೈಗೆ ತೆಂಗಿನೆಣ್ಣೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ನಿಮ್ಮ ತ್ವಚೆ ಮೃದುವಾಗುತ್ತದೆ ಹಾಗೂ ಹೊಳಪು ಪಡೆದುಕೊಳ್ಳುತ್ತದೆ. ಮನೆಯ ಸಾಕು ಪ್ರಾಣಿಗಳಿಗೆ ಅಲರ್ಜಿ, ತುರಿಕೆಯಂಥ ಸಮಸ್ಯೆ ಇದ್ದರೂ ತೆಂಗಿನಣ್ಣೆ ನೈಸರ್ಗಿಕವಾಗಿ ಪರಿಣಾಮ ಬೀರಿ ಸಮಸ್ಯೆಯನ್ನು ದೂರ ಮಾಡುತ್ತದೆ.