ವ್ಯಕ್ತಿಯೊಬ್ಬರು ತೆಂಗಿನಕಾಯಿ ಕೀಳುವ ಸಲುವಾಗಿ ಮರ ಹತ್ತಿದ್ದ ವೇಳೆಯೇ ತೀವ್ರ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು, ಬಳಿಕ ಅವರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ಮೂಲಕ ಕೆಳಗಿಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಮೈಲಸಂದ್ರ ನಿವಾಸಿ ನಾರಾಯಣಪ್ಪ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ನಾರಾಯಣಪ್ಪ ಜೊತೆಗೆ ತೆಂಗಿನಕಾಯಿ ಕಿತ್ತು ಕೊಡುವ ಕೆಲಸವನ್ನೂ ಮಾಡುತ್ತಿದ್ದರು.
ಸೋಮವಾರದಂದು ಮೈಲಸಂದ್ರದ ವೆಂಕಟರಮಣ ದೇವಾಲಯದ ಆವರಣದಲ್ಲಿರುವ ತೆಂಗಿನ ಮರದಿಂದ ಕಾಯಿ ಕೀಳಲು ಅವರು ಹತ್ತಿದ್ದರು. ಆದರೆ ಎಷ್ಟೊತ್ತಾದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಲಾಗಿತ್ತು.
ಅವರು ಬಂದು ಪರಿಶೀಲಿಸಿದ ವೇಳೆ ನಾರಾಯಣಪ್ಪ ಮರದ ಮೇಲೆ ಮೃತಪಟ್ಟಿರುವುದು ಕಂಡು ಬಂದಿದೆ. ಬಳಿಕ ಕ್ರೇನ್ ಸಹಾಯದಿಂದ ಅವರ ಪಾರ್ಥಿವ ಶರೀರವನ್ನು ಕೆಳಗಿಳಿಸಲಾಗಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.