ಚಂಡೀಗಢ: ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ಸಿಗಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಅವರನ್ನು ಈಗಲೂ ಕೀಳಾಗಿ ಕಾಣಲಾಗುತ್ತಿದೆ. ಅಂಥಾದ್ರಲ್ಲಿ ಪಂಜಾಬ್ ನ ಚಂಡೀಗಢದಲ್ಲಿ ವೃದ್ಧ ದಂಪತಿಗಳು ತೃತೀಯಲಿಂಗಿ ದಂಪತಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಅವರ ಈ ಕಥೆ ನಿಮ್ಮ ಹೃದಯ ಗೆಲ್ಲುತ್ತದೆ.
ತನ್ನ ಕುಟುಂಬ ಮತ್ತು ಸಮಾಜದಿಂದ ಹಲವಾರು ವರ್ಷಗಳ ಅವಮಾನ ಹಾಗೂ ನಿಂದನೆಯನ್ನು ಎದುರಿಸಿದ ನಂತರ, ಟ್ರಾನ್ಸ್ ಮಹಿಳೆಯಾದ ಧನಂಜಯ್ ತನ್ನ ಹೊಸ ಪೋಷಕರನ್ನು ಕಂಡುಕೊಂಡಿದ್ದಾರೆ. ಸಮಾಜದಲ್ಲಿ ತಮ್ಮನ್ನು ಒಪ್ಪಿಕೊಳ್ಳಲು ಅವರು ದಶಕಗಳ ಕಾಲ ಹೋರಾಡಿದ್ದಾರೆ.
ಚಂಡೀಗಢದಲ್ಲಿ ವಾಸಿಸುವ ಧನಂಜಯ್ ಮತ್ತು ಅವರ ಪತಿ ರುದ್ರನನ್ನು ಚಾಹಲ್ ಕುಟುಂಬ ದತ್ತು ತೆಗೆದುಕೊಂಡಿದೆ. ಭಾರತದಲ್ಲಿ ದತ್ತು ತೆಗೆದುಕೊಳ್ಳುವ ರೂಢಿಗತ ಕಲ್ಪನೆಗಳಿಗೆ ವಿರುದ್ಧವಾಗಿ, ಚಂಡೀಗಢದಲ್ಲಿ ವಾಸಿಸುವ ಚಾಹಲ್ ಕುಟುಂಬವು ಸಹಾನುಭೂತಿ ಮತ್ತು ಮಾನವೀಯತೆಯನ್ನು ಹೊಂದಿದೆ.
ಶಂಶೇರ್(93) ಮತ್ತು ಅವರ ಪತಿ ವಕೀಲ ದರ್ಬಾರಾ ಸಿಂಗ್ ಚಾಹಲ್ (95), ತಮ್ಮ ಮೂರನೇ ಪುತ್ರಿಯಾಗಿ ಧನಂಜಯ್ ರನ್ನು ಸ್ವೀಕರಿಸಿದ್ದಾರೆ. ಜೊತೆಗೆ ಅವರ ಪಾರ್ಟ್ನರ್ ರುದ್ರ ಪ್ರತಾಪ್ ಸಿಂಗ್ ರನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ.
ಚಹಾಲ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಥಕ್ ತಜ್ಞ ಸಮೀರಾ ಕೋಸರ್ ಮತ್ತು ಅಮೆರಿಕ ಮೂಲದ ಸ್ತ್ರೀರೋಗತಜ್ಞ ಡಾ. ಮಮತಾ ಚಾಹಲ್ ತಮ್ಮ ಪೋಷಕರಲ್ಲಿ ದತ್ತು ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದಾರೆ.
ಈ ಬಗ್ಗೆ ತೃತೀಯಲಿಂಗಿ ಧನಂಜಯ್ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ನಾವು ದತ್ತು ಪಡೆದಿದ್ದೇವೆ ಎಂದು ಅನಿಸುತ್ತಿಲ್ಲ. ನಾವು ತುಂಬಾ ಆತ್ಮೀಯರಾಗಿದ್ದೇವೆ. ನಮ್ಮೆಲ್ಲರ ನಡುವೆ ಸಾಕಷ್ಟು ಪರಸ್ಪರ ಪ್ರೀತಿ ಇದೆ. ತಂದೆ-ತಾಯಿ ನಮ್ಮ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ ಮತ್ತು ನಾವು ತುಂಬಾ ಅದೃಷ್ಟವಂತರಾಗಿದ್ದೇವೆ. ನಾವು ನಮ್ಮ ಹೆತ್ತವರನ್ನು ಕಂಡುಕೊಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.