ಕೆಲಸದ ಒತ್ತಡವಿದ್ದಾಗ ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಅನೇಕ ಕಾಯಿಲೆಗಳಿಗೆ ನಾವು ತುತ್ತಾಗುತ್ತೇವೆ. ಕೆಲಸದ ಟೆನ್ಷನ್‌ನಿಂದ ಎಷ್ಟೋ ಬಾರಿ ನಿದ್ರಾಹೀನತೆ ಕೂಡ ಉಂಟಾಗುತ್ತದೆ.
ನಿದ್ರೆ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಬಹಳ ಮುಖ್ಯ. ಚೆನ್ನಾಗಿ ನಿದ್ದೆ ಮಾಡಿದ್ರೆ ನಮ್ಮ ದಿನದ ಆಯಾಸವೆಲ್ಲ ಕಡಿಮೆಯಾಗಿ ದೇಹ ಮತ್ತು ಮನಸ್ಸು ಉಲ್ಲಾಸವಾಗಿರುತ್ತದೆ. ಆದ್ರೆ ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ ಬೇರೆ ಸಮಸ್ಯೆಗಳ ಜೊತೆಗೆ ನಿಮ್ಮ ತೂಕ ಕೂಡ ಹೆಚ್ಚಾಗುತ್ತದೆ.
ನೀವು ಪ್ರತಿದಿನ ಚೆನ್ನಾಗಿ ನಿದ್ದೆ ಮಾಡಿದರೆ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ನಿದ್ರೆಯ ಕೊರತೆಯಿಂದಾಗಿ ನಿಮ್ಮ ದೇಹದ ಚಯಾಪಚಯ ಕ್ರಿಯೆಯು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇದು ಸಾರ್ವಕಾಲಿಕ ಆಯಾಸ ಮತ್ತು ಆಲಸ್ಯಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವೇ ತೂಕದಲ್ಲಿ ಹೆಚ್ಚಳವಾಗುವುದು.
ನಿದ್ರೆಯ ಕೊರತೆಯಿಂದ ದೇಹದಲ್ಲಿ ಗ್ರೆಲಿನ್ ಹಾರ್ಮೋನ್ ಹೆಚ್ಚಾಗುತ್ತದೆ. ಇದರಿಂದಲೂ ತೂಕ ಹೆಚ್ಚಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಗ್ರೆಲಿನ್ ಹಾರ್ಮೋನ್ ಹಸಿವನ್ನು ಹೆಚ್ಚಿಸುತ್ತದೆ. ಪರಿಣಾಮ ಇಡೀ ದಿನ ನೀವು ಜಂಕ್ ಫುಡ್ ಸೇವಿಸುವ ಸಾಧ್ಯತೆ ಹೆಚ್ಚು. ಚೆನ್ನಾಗಿ ನಿದ್ದೆ ಆಗದೇ ಇದ್ದಾಗ ಬೆಳಗ್ಗೆ ವ್ಯಾಯಾಮ ಮಾಡಲು ಉತ್ಸಾಹವೇ ಇರುವುದಿಲ್ಲ.
ವ್ಯಾಯಾಮದಿಂದ ದೂರ ಓಡಿದ್ರೆ ಸಹಜವಾಗಿಯೇ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಆಲಸ್ಯ ಅಥವಾ ಆಯಾಸವನ್ನು ದೂರ ಮಾಡಲು 7-8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಡೀಪ್ ಸ್ಲೀಪರ್‌ಗಳು ಮರುದಿನ ಹೆಚ್ಚು ಸಕ್ರಿಯರಾಗಿರುತ್ತಾರೆ ಮತ್ತು ಉಲ್ಲಾಸದಿಂದ ಇರುತ್ತಾರೆ. ಸರಿಯಾಗಿ ನಿದ್ದೆ ಮಾಡದಿದ್ದರೆ ದಿನವಿಡೀ ಆಲಸ್ಯ ಮತ್ತು ಆಯಾಸವನ್ನು ಅನುಭವಿಸುತ್ತೀರಿ. ಇದರಿಂದಾಗಿ ನಿಮ್ಮ ಕ್ಯಾಲೋರಿ ಬರ್ನ್ ಕಡಿಮೆಯಾಗುತ್ತದೆ. ಪರಿಣಾಮ ತೂಕ ಹೆಚ್ಚಾಗುತ್ತದೆ.