ನಮ್ಮ ಇಡೀ ದಿನ ನಿಂತಿರೋದು ದಿನ ಪ್ರಾರಂಭ ಹೇಗಿರುತ್ತೆ ಅನ್ನೋದರ ಮೇಲೆ. ದಿನವನ್ನು ನಾವು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯ, ತೂಕ ಇಳಿಕೆ ಇವೆಲ್ಲವೂ ನಮ್ಮ ಜೀವನಶೈಲಿಯನ್ನು ಅವಲಂಬಿಸಿದೆ.
ಸಮತೋಲಿತ ಆಹಾರ ತೆಗೆದುಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಅನಾರೋಗ್ಯಕರ ಜೀವನಶೈಲಿಯನ್ನು ತ್ಯಜಿಸುವುದು ಇವೆಲ್ಲವೂ ನಮ್ಮ ಸದೃಢತೆಗೆ ಮೂಲ ಮಂತ್ರಗಳು. ನಿಮ್ಮ ಬೆಳಗಿನ ದಿನಚರಿಯಲ್ಲಿ ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ ನೀವು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತೀರಿ. ತೂಕ ಇಳಿಸಲು ಸಹ ಇವು ಸಹಕಾರಿಯಾಗುತ್ತವೆ. ಅಂತಹ ಯಾವ್ಯಾವ ಅಭ್ಯಾಸಗಳನ್ನು ಮಾಡಿಕೊಳ್ಳಬೇಕು ಅನ್ನೋದನ್ನು ನೋಡೋಣ.
ಆರೋಗ್ಯಕರವಾಗಿರುವ ಕಲ್ಪನೆಯೊಂದಿಗೆ ದಿನವನ್ನು ಪ್ರಾರಂಭಿಸಿ. ಬೆಳಗ್ಗೆ ಎದ್ದ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಉತ್ತಮ ಆಲೋಚನೆ ಮಾಡುವುದು. ಆರೋಗ್ಯಕರ ದೇಹವನ್ನು ಬಯಸುತ್ತೀರಿ ಎಂಬ ಆಲೋಚನೆಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಆರೋಗ್ಯಕರ ಆಹಾರವನ್ನು ಮಾತ್ರ ತಿನ್ನುತ್ತೇನೆಂದು ನಿರ್ಧರಿಸಿಕೊಳ್ಳಿ.
ಡೀಪ್ ಬ್ರೆತ್ ಅಥವಾ ದೀರ್ಘ ಉಸಿರಾಟವನ್ನು ಅಭ್ಯಾಸ ಮಾಡುವುದರಿಂದ ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯವಾಗುತ್ತದೆ. ದೀರ್ಘ ಉಸಿರಾಟದಿಂದ ಚಯಾಪಚಯವು ವೇಗ ಪಡೆದುಕೊಳ್ಳುತ್ತದೆ. ಇದು ತೂಕ ನಷ್ಟಕ್ಕೆ ಸಹಾಯಕವಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದಲ್ಲದೆ ಪ್ರತಿದಿನ ಬೆಳಗ್ಗೆ ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮ ಮಾಡುವುದರಿಂದ ಶ್ವಾಸಕೋಶಗಳು ಆರೋಗ್ಯವಾಗಿರುತ್ತವೆ.
ಪ್ರತಿದಿನ 5 ರಿಂದ 10 ನಿಮಿಷಗಳ ಕಾಲ ದೀರ್ಘ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಿ. ಪ್ರತಿದಿನ ಬೆಳಗ್ಗೆ ಕೆಲವು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವುದು ಮತ್ತು ವಾಕಿಂಗ್ ಮಾಡುವುದು ತೂಕ ಇಳಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಸ್ಟ್ರೆಚಿಂಗ್ ಸಮಯದಲ್ಲಿ ನಿಮ್ಮ ಸ್ನಾಯುಗಳು ಹಿಗ್ಗುತ್ತವೆ. ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಅಲ್ಲದೆ ವಾಕಿಂಗ್ ಸ್ವತಃ ಒಂದು ಉತ್ತಮ ವ್ಯಾಯಾಮ. ಇದರಿಂದ ಇಡೀ ದೇಹಕ್ಕೆ ಲಾಭವಾಗುವುದರ ಜೊತೆಗೆ ತೂಕವೂ ಕಡಿಮೆಯಾಗುತ್ತದೆ.