ತೂಕ ಇಳಿಸುವುದಕ್ಕಾಗಿ ಇಂದು ಜನರು ಅನೇಕ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಕೆಲವರು ಆಹಾರದಲ್ಲಿ ಕಟ್ಟುನಿಟ್ಟಾಗಿರುತ್ತಾರೆ. ಇನ್ನು ಕೆಲವರು ಜಿಮ್ ಗಳಿಗೆ ಹೋಗಿ ವರ್ಕ್ ಔಟ್ ಮಾಡ್ತಾರೆ. ಆದರೆ ಚಳಿಗಾಲ ಬಂತೆಂದರೆ ವ್ಯಾಯಾಮ, ವರ್ಕೌಟ್ ಇವೆಲ್ಲ ಕಷ್ಟಸಾಧ್ಯ. ಹಾಗಿರುವಾಗ ಚಳಿಗಾಲದಲ್ಲಿ ಕೆಲವು ಸೂಪ್ ಗಳನ್ನು ಮನೆಯಲ್ಲೇ ತಯಾರಿಸಿ ಡಯಟ್ ನಲ್ಲಿ ಅವುಗಳನ್ನು ಸೇರಿಸಿಕೊಳ್ಳಬಹುದು. ಈ ಸೂಪ್ ಗಳು ನಿಮ್ಮ ತೂಕ ಇಳಿಯುವಲ್ಲಿ ಸಹಕಾರಿಯಾಗಿವೆ.
ಹೂಕೋಸಿನ ಸೂಪ್ : ಚಳಿಗಾಲದಲ್ಲಿ ತೂಕ ಇಳಿಸಲು ಕಾಲಿಫ್ಲವರ್ ಸೂಪ್ ಅನ್ನು ಬಳಸಬಹುದು. ಹೂಕೋಸಿನಲ್ಲಿ ಫೈಬರ್ ಮತ್ತು ಎಂಟಿ ಆಕ್ಸಿಡೆಂಟ್ ಪ್ರಮಾಣಗಳು ಹೆಚ್ಚಿರುತ್ತವೆ. ಹಾಗಾಗಿ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಸೂಪ್ ಮಾಡುವ ವಿಧಾನ : ಹೂಕೋಸಿನ ಸೂಪ್ ಮಾಡಲು ಮೊದಲು ಹೂಕೋಸನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪ್ಯಾನ್ ಗೆ ಒಂದು ಚಮಚ ಎಣ್ಣೆ ಹಾಕಿ ಅದಕ್ಕೆ ಒಂದು ಚಮಚ ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿ 2-3 ನಿಮಿಷಗಳ ಕಾಲ ಹುರಿಯಿರಿ. ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ನಂತರ ಚೆನ್ನಾಗಿ ತೊಳೆದ ಹೂಕೋಸನ್ನು ಅದಕ್ಕೆ ಹಾಕಿ 2 ಗ್ಲಾಸ್ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ 10 ನಿಮಿಷ ಬೇಯಿಸಿ. ಸೂಪ್ ಪೂರ್ತಿಯಾಗಿ ತಣ್ಣಗಾದ ಮೇಲೆ ತರಕಾರಿಯನ್ನು ಚೆನ್ನಾಗಿ ನಾದಿ ಸೂಪ್ ಅನ್ನು ಕುಡಿಯಿರಿ.
ಪಾಲಕ್ ಸೂಪ್ : ಚಳಿಗಾಲದಲ್ಲಿ ಎಲ್ಲ ಕಡೆಯೂ ಪಾಲಕ್ ಸೊಪ್ಪು ಲಭ್ಯವಿರುತ್ತದೆ. ಪಾಲಕ್ ಸೂಪ್ ಕೂಡ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಫೋಲಿಕ್ ಎಸಿಡ್, ಕ್ಯಾಲ್ಸಿಯಮ್ ಮತ್ತು ಐರನ್ ಮುಂತಾದ ಪೌಷ್ಠಿಕ ಸತ್ವಗಳು ಆಗರವಾಗಿದೆ.
ಸೂಪ್ ಮಾಡುವ ವಿಧಾನ : ಪಾಲಕ್ ಸೂಪ್ ಮಾಡಲು ಪಾಲಕನ್ನು ತೊಳೆದು ಹೆಚ್ಚಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ಒಂದು ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಜೀರಿಗೆ ಮತ್ತು ಒಂದು ಚಮಚ ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ನಂತರ ಈರುಳ್ಳಿಯನ್ನು ಹಾಕಿ 2-3 ನಿಮಿಷಗಳ ಕಾಲ ಹುರಿಯಿರಿ.
ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ನಂತರ ಚೆನ್ನಾಗಿ ತೊಳೆದ ಪಾಲಕ್ ಅನ್ನು ಹಾಕಿ ನೀರು ಹಾಕಿ ಮುಚ್ಚಿ. ಪಾಲಕ್ ಸ್ವಲ್ಪ ಬೆಂದ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ 10 ನಿಮಿಷ ಬೇಯಿಸಿ. ಪಾಲಕ್ ಸೂಪ್ ನ ಟೇಸ್ಟ್ ಹೆಚ್ಚಿಸಲು ನೀವು ಬೇಕಾದರೆ ಟೊಮೇಟೋವನ್ನು ಸೇರಿಸಬಹುದು. ಸೂಪ್ ನಲ್ಲಿರುವ ಪಾಲಕ್ ಸೊಪ್ಪನ್ನು ಚೆನ್ನಾಗಿ ನಾದಿಕೊಂಡು ಕುಡಿಯಿರಿ.