ಟೊಮೆಟೋ ಇಲ್ಲದೆ ಪ್ರತಿದಿನ ಅಡುಗೆ ಮಾಡೋದೆ ಕಷ್ಟ. ಟೊಮೆಟೋದಲ್ಲಿ ವೆರೈಟಿ ವೆರೈಟಿ ಮೇಲೋಗರ ಮಾಡುವ ನಾವು ಅದರಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಟೊಮೆಟೋದಲ್ಲಿ ಅನೇಕ ಬಗೆಯ ಪೋಷಕಾಂಶಗಳಿವೆ. ಕ್ಯಾಲ್ಸಿಯಂ, ವಿಟಮಿನ್, ರಂಜಕದ ಅಂಶ ಕೂಡ ಟೊಮೆಟೋದಲ್ಲಿದೆ.
ಇದು ಔಷಧವಾಗಿಯೂ ಕಾರ್ಯನಿರ್ವಹಿಸುತ್ತದೆ. ಲೈಕೋಪೀನ್ ಟೊಮೆಟೋದಲ್ಲಿ ವಿಶೇಷವಾಗಿ ಕಂಡುಬರುತ್ತದೆ, ಇದನ್ನು ಶಕ್ತಿಯುತವಾದ ಉತ್ಕರ್ಷಣ ನಿರೋಧಕವೆಂದು ಪರಿಗಣಿಸಲಾಗಿದೆ. ಟೊಮೆಟೊ ಜ್ಯೂಸ್ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೊಮೆಟೋ ರಸ ಸವಿಯುವುದರಿಂದ ಆಗುವ ಇನ್ನಷ್ಟು ಪ್ರಯೋಜನಗಳನ್ನು ಕೂಡ ತಿಳಿಯೋಣ.
ರೋಗ ನಿರೋಧಕ ಶಕ್ತಿ ಹೆಚ್ಚಳ : ವಿಟಮಿನ್‌ಗಳು ಟೊಮೆಟೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ವಿಶೇಷವಾಗಿ ವಿಟಮಿನ್-ಸಿ ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಜೊತೆಗೆ ಬೀಟಾ-ಕ್ಯಾರೋಟಿನ್, ಲೈಕೋಪೀನ್, ವಿಟಮಿನ್-ಇ ಇತ್ಯಾದಿಗಳು ಸಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿವೆ. ಟೊಮೆಟೊ ಸೇವನೆಯಿಂದ ಸ್ವತಂತ್ರ ರಾಡಿಕಲ್‌ಗಳಿಂದಲೂ ರಕ್ಷಣೆ ಪಡೆಯಬಹುದು.
ತೂಕ ನಿಯಂತ್ರಣ: ಟೊಮೆಟೊ ಜ್ಯೂಸ್ ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಟೊಮ್ಯಾಟೊ ರಸದಲ್ಲಿ ಫೈಬರ್ ಕಂಡುಬರುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಹಾಗೆಯೇ ಟೊಮೆಟೊ ರಸವು ನಮ್ಮ ಕರುಳಿಗೆ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಿಸಿಕೊಳ್ಳಲು ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ. ಇದರಿಂದಾಗಿ ತೂಕ ಕಡಿಮೆಯಾಗುವುದರ ಜೊತೆಗೆ ದೇಹಕ್ಕೆ ಶಕ್ತಿಯೂ ಸಿಗುತ್ತದೆ.
ಹೃದಯದ ಆರೋಗ್ಯ: ಟೊಮೆಟೊ ಜ್ಯೂಸ್ ಹೃದಯದ ಆರೋಗ್ಯಕ್ಕೂ ಬೇಕು. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಮತ್ತು ಲೈಕೋಪೀನ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು. ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಕೊಬ್ಬಿನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ. ಏಕೆಂದರೆ ಇವೆಲ್ಲವೂ ಜಾಸ್ತಿಯಾದಲ್ಲಿ ನಮ್ಮ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ಆರೋಗ್ಯಕರ ಚರ್ಮಕ್ಕಾಗಿ: ನೀವು ಉತ್ತಮ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಲು ಬಯಸಿದರೆ, ಟೊಮೆಟೊ ರಸವನ್ನು ಸೇವಿಸಬೇಕು. ಪ್ರತಿದಿನ ಟೊಮೆಟೊ ರಸವನ್ನು ಕುಡಿಯುವುದರಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ. ಮೊಡವೆಗಳು, ಒಣ ಚರ್ಮ ಮುಂತಾದ ಇತರ ಸಮಸ್ಯೆಯನ್ನೂ ಇದು ಹೋಗಲಾಡಿಸುತ್ತದೆ.