ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವಹಿವಾಟುಗಳ ಹೆಸರಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಗ್ರಾಹಕರ ಖಾತೆಯಿಂದ ವಂಚಕರು ಹಣ ಲೂಟಿ ಮಾಡ್ತಿದ್ದಾರೆ. ಹಾಗಾಗಿ ಭಾರತದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಎನಿಸಿಕೊಂಡಿರೋ SBI ಈ ಬಗ್ಗೆ ಆಗಾಗ ಗ್ರಾಹಕರನ್ನು ಎಚ್ಚರಿಸುತ್ತಲೇ ಇರುತ್ತದೆ. ಗ್ರಾಹಕರು ತ್ವರಿತ ಸಾಲದ ಅಪ್ಲಿಕೇಶನ್‌ಗಳ ಬಲೆಗೆ ಬೀಳುವುದನ್ನು ತಪ್ಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಸುರಕ್ಷತಾ ಸಲಹೆಗಳನ್ನು ನೀಡಿದೆ.
ಆನ್‌ಲೈನ್‌ನಲ್ಲಿ ಬ್ಯಾಂಕ್ ಗ್ರಾಹಕರು ವಂಚನೆಗೊಳಗಾಗಿದ್ದರೆ ಈ ಬಗ್ಗೆ cybercrime.gov.in ನಲ್ಲಿ ದೂರು ಕೂಡ ನೀಡಬಹುದು. ಸದ್ಯ ಚೀನಾದ ತ್ವರಿತ ಸಾಲದ ಅಪ್ಲಿಕೇಶನ್‌ಗಳು ಗ್ರಾಹಕರನ್ನು ವಂಚಿಸ್ತಾ ಇವೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಕೂಡ ಕಾರ್ಯನಿರತವಾಗಿದೆ. ತ್ವರಿತ ಸಾಲದ ಅಪ್ಲಿಕೇಶನ್‌ಗಳ ಪ್ರಸರಣ ಸೈಬರ್ ಅಪರಾಧದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಾಲಗಾರರು ಅತಿಯಾದ ಬಡ್ಡಿದರಗಳನ್ನು ಪಾವತಿಸಲು ಮುಂದಾಗುತ್ತಾರೆ ಮತ್ತು ಅಕ್ರಮವಾಗಿ ಸಾಲ ಪಡೆಯಲು ಹೋಗಿ ಮೋಸ ಹೋಗ್ತಿದ್ದಾರೆ. SBI ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದೆ.
ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, ಬ್ಯಾಂಕ್ ಅಥವಾ ಹಣಕಾಸು ಕಂಪನಿಯಂತೆ ನಟಿಸುವ ವಂಚಕರಿಗೆ ಯಾವುದೇ ಮಾಹಿತಿ ನೀಡಬೇಡಿ. ಸೈಬರ್ ಅಪರಾಧಗಳನ್ನು http://cybercrime.gov.in.ನಲ್ಲಿ ವರದಿ ಮಾಡಿ ಅನ್ನೋದು SBI ಸಲಹೆ.
ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡುವ ಮೊದಲು ಅಪ್ಲಿಕೇಶನ್‌ನ ದೃಢೀಕರಣವನ್ನು ಪರಿಶೀಲಿಸಬೇಕು. ಯಾಕಂದ್ರೆ ಬಳಕೆದಾರರನ್ನು ಬಲೆಗೆ ಬೀಳಿಸಿಕೊಂಡು ಅವರ ಖಾತೆಗಳಿಂದ ಹಣ ಲೂಟಿ ಮಾಡುವ ಸಾಕಷ್ಟು ಅಕ್ರಮ ಅಪ್ಲಿಕೇಶನ್‌ಗಳಿವೆ.
ನೀವು ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು. ನಿಮ್ಮ ಡೇಟಾವನ್ನು ಕದಿಯಬಹುದಾದ ಅನಧಿಕೃತ ಅಪ್ಲಿಕೇಶನ್‌ಗಳನ್ನು ಬಳಸಬೇಡಿ.
ನಿಮ್ಮ ಡೇಟಾವನ್ನು ಕದಿಯದಂತೆ ಸುರಕ್ಷಿತವಾಗಿರಿಸಲು ಅಪ್ಲಿಕೇಶನ್ ಅನುಮತಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ.
ಸಾಲ ನೀಡುವ ಅಪ್ಲಿಕೇಶನ್‌ಗಳು ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ವರದಿ ಮಾಡಬೇಕು. ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗಾಗಿ http://bank.sbi ಗೆ ವಿಸಿಟ್ ಮಾಡಬಹುದು.