ತುಪ್ಪ ವಿವಿಧ ಬಗೆಯ ಅಡುಗೆಯಿಂದ ಹಿಡಿದು ತ್ವಚೆಯ ರಕ್ಷಣೆಯವರೆಗೂ ಇದು ಅಗತ್ಯ. ಆದರೆ ಎಲ್ಲರಿಗೂ ಸರಿಯಾದ ರೀತಿಯಲ್ಲಿ ತುಪ್ಪ ಮಾಡುವುದಕ್ಕೆ ಬರುವುದಿಲ್ಲ. ಇದನ್ನು ಕಾಯಿಸುವುದು ಸ್ವಲ್ಪ ಹೆಚ್ಚು ಕಡಿಮೆಯಾದರೆ ತುಪ್ಪದ ಸ್ವಾದವೇ ಹೊರಟುಹೋಗುತ್ತದೆ. ಮರಳು ಮರಳಾದ ತುಪ್ಪವನ್ನು ಮಾಡುವುದಕ್ಕೆ ಇಲ್ಲಿ ಸುಲಭವಾದ ಟಿಪ್ಸ್ ಇದೆ. ಒಮ್ಮೆ ಟ್ರೈ ಮಾಡಿ.
ಬೆಣ್ಣೆ 5ರಿಂದ 6 ಸಲ ಚೆನ್ನಾಗಿ ತೊಳೆಯಿರಿ. ನಂತರ ಇದನ್ನು ಒಂದು ಅಗಲವಾದ ಪಾತ್ರೆಗೆ ಹಾಕಿಕೊಂಡು ಗ್ಯಾಸ್ ಮೇಲೆ ಸಣ್ಣ ಉರಿಯಲ್ಲಿ ಇಡಿ. ನಂತರ ಒಂದು ಒಗ್ಗರಣೆ ಪಾತ್ರೆಗೆ ¼ ಟೀ ಸ್ಪೂನ್ ಮೆಂತೆಕಾಳು ಹಾಕಿ ಸಣ್ಣ ಉರಿಯಲ್ಲಿ ಕೆಂಪಾಗುವವರೆಗೆ ಹುರಿಯಿರಿ.
ಇದನ್ನು ಸ್ವಲ್ಪ ತರಿತರಿಯಾಗಿ ಜಜ್ಜಿಕೊಳ್ಳಿ. ಗ್ಯಾಸ್ ಮೇಲೆ ಇದ್ದ ಬೆಣ್ಣೆ ಕರಗಿದ ಮೇಲೆ ಪುಡಿ ಮಾಡಿಕೊಂಡ ಮೆಂತೆಕಾಳು, ಚಿಟಿಕೆ ಅರಿಶಿನ ಹಾಕಿ ನಂತರ ಸ್ವಲ್ಪ ಹೊತ್ತು ಬಿಟ್ಟು 1 ವೀಳ್ಯದೆಲೆಯನ್ನು ಪೀಸ್ ಮಾಡಿ ಹಾಕಿಕೊಳ್ಳಿ. ತುಪ್ಪ ಚೆನ್ನಾಗಿ ಕುದಿಯಲಿ ಯಾವುದೇ ಕಾರಣಕ್ಕೂ ಜೋರು ಉರಿಯಲ್ಲಿ ಇಡಬೇಡಿ.
ಬೆಣ್ಣೆಯೆಲ್ಲಾ ಕರಗಿ ಗುಳ್ಳೆ ಗುಳ್ಳೆ ರೀತಿ ಬರುತ್ತದೆ. ಇದು ಉಕ್ಕು ಬಂದ ಕೂಡಲೆ ಗ್ಯಾಸ್ ಆಫ್ ಮಾಡಿ. 1 ಹರಳು ಉಪ್ಪು, 4 ಹರಳು ಸಕ್ಕರೆ ಸೇರಿಸಿ. ನಂತರ ಇದು ತಣ್ಣಗಾದ ಮೇಲೆ ಗಾಜಿನ ಬಾಟಲಿಗೆ ಸೋಸಿಕೊಳ್ಳಿ. ಹೀಗೆ ಮಾಡುವುದರಿಂದ ತುಪ್ಪ ಚೆನ್ನಾಗಿ ಆಗುತ್ತದೆ.