ಹೊಳೆಯುವ ಗುಲಾಬಿ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕೆಲವೊಮ್ಮೆ ತುಟಿಗಳ ಬಗ್ಗೆ ಗಮನ ಹರಿಸದೇ ಇದ್ದರೆ ಅವು ಕಪ್ಪಗಾಗುತ್ತವೆ. ಲಿಪ್ ಬಾಮ್ ಹಚ್ಚಿದ್ರೂ ಪ್ರಯೋಜನವಾಗುವುದಿಲ್ಲ. ಇವುಗಳನ್ನು ಮತ್ತೆ ಕೆಂಪಗಾಗಿಸಲು ಸುಲಭ ಮನೆಮದ್ದುಗಳಿವೆ.
ತೆಂಗಿನೆಣ್ಣೆ ಮತ್ತು ಎಳ್ಳೆಣ್ಣೆ ತುಟಿಗಳ ಕಪ್ಪು ಬಣ್ಣವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅರ್ಧ ಚಮಚ ತೆಂಗಿನ ಎಣ್ಣೆ ಮತ್ತು ಅರ್ಧ ಚಮಚ ಎಳ್ಳಿನ ಎಣ್ಣೆಯನ್ನು ತೆಗೆದುಕೊಳ್ಳಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಐದು ನಿಮಿಷಗಳ ಕಾಲ ತುಟಿಗಳಿಗೆ ಮಸಾಜ್ ಮಾಡಿ, 30 ನಿಮಿಷ ಹಾಗೇ ಬಿಡಿ. ಈ ರೀತಿ ಮಾಡುವುದರಿಂದ ಕ್ರಮೇಣ ತುಟಿಗಳ ಕಪ್ಪು ಮಾಯವಾಗುತ್ತದೆ.
ಸಕ್ಕರೆ ಹಾಗೂ ಎಳ್ಳೆಣ್ಣೆಯನ್ನು ಬಳಸಿ. ಒಂದು ಸಣ್ಣ ಚಮಚ ಸಕ್ಕರೆಯನ್ನು ತೆಗೆದುಕೊಂಡು ಅದನ್ನು ಪುಡಿಮಾಡಿ. ಅರ್ಧ ಚಮಚ ಎಳ್ಳಿನ ಎಣ್ಣೆಗೆ ಸಕ್ಕರೆ ಪುಡಿ ಬೆರೆಸಿ ಅದರಿಂದ ತುಟಿಗಳ ಮೇಲೆ ಸ್ಕ್ರಬ್ ಮಾಡಿ. ಮೂರರಿಂದ ನಾಲ್ಕು ನಿಮಿಷ ಈ ರೀತಿ ಸ್ಕ್ರಬ್ ಮಾಡಿ ನಂತರ ನೀರಿನಿಂದ ತುಟಿಯನ್ನು ಸ್ವಚ್ಛ ಮಾಡಿ.
ತುಟಿಗಳ ಕಪ್ಪನ್ನು ಹೋಗಲಾಡಿಸಲು ಅರಿಶಿನ ಮತ್ತು ಎಳ್ಳಿನ ಎಣ್ಣೆಯನ್ನು ಸಹ ಬಳಸಬಹುದು. ಇದಕ್ಕಾಗಿ ಅರ್ಧ ಚಮಚ ಎಳ್ಳಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಎರಡು ಚಿಟಿಕೆ ಅರಿಶಿನವನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ತುಟಿಗಳ ಮೇಲೆ ಹಚ್ಚಿ ಮತ್ತು ಎರಡು ನಿಮಿಷಗಳ ಕಾಲ ಮಸಾಜ್ ಮಾಡಿ. ಅರ್ಧ ಘಂಟೆಯವರೆಗೆ ಹಾಗೆಯೇ ಬಿಡಿ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದಲೂ ಗುಲಾಬಿ ತುಟಿ ನಿಮ್ಮದಾಗುತ್ತದೆ.