ದಿನ ತರಕಾರಿ ಸಾಂಬಾರು ತಿಂದು ಬೇಜಾರು ಆದವರು ಅಥವಾ ಮನೆಯಲ್ಲಿ ಮಾಡುವುದಕ್ಕೆ ಇವತ್ತೇನೂ ತರಕಾರಿ ಇಲ್ಲ ಎಂದುಕೊಳ್ಳುವವರಿಗೆ ಇಲ್ಲಿ ಸುಲಭವಾಗಿ ಈರುಳ್ಳಿ ಗೊಜ್ಜು ಮಾಡುವ ವಿಧಾನ ಇದೆ ನೋಡಿ. ಇದು ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಚಪಾತಿ, ಅನ್ನ, ದೋಸೆಗೆ ಹೇಳಿ ಮಾಡಿಸಿದ್ದು ಈ ಗೊಜ್ಜು.
ಬೇಕಾಗುವ ಸಾಮಾಗ್ರಿಗಳು: ಈರುಳ್ಳಿ-2 ದೊಡ್ಡ ಗಾತ್ರದ್ದು , 1-ಟೊಮೆಟೊ, 3 ಎಸಳು-ಬೆಳ್ಳುಳ್ಳಿ, 2 ಹಸಿಮೆಣಸು, ಹುರಿಕಡಲೆ-1 ಟೇಬಲ್ ಸ್ಪೂನ್, ತೆಂಗಿನ ತುರಿ-2 ಟೇಬಲ್ ಸ್ಪೂನ್, ಜೀರಿಗೆ-1/2 ಟೀ ಸ್ಪೂನ್, ಸಾರಿನ ಪುಡಿ-1 ಟೇಬಲ್ ಸ್ಪೂನ್, ¼ ಟೇಬಲ್ ಸ್ಪೂನ್ ಸಾಸಿವೆ, ರುಚಿಗೆ ತಕ್ಕಷ್ಟು, ಉಪ್ಪು, ಎಣ್ಣೆ-2 ಟೇಬಲ್ ಸ್ಪೂನ್, ಉದ್ದಿನಬೇಳೆ-1 ಟೀ ಸ್ಪೂನ್, 1 ಟೇಬಲ್ ಸ್ಪೂನ್ ನಷ್ಟು-ಕಡಲೆಬೇಳೆ, ಹುಣಸೆಹಣ್ಣಿನ ರಸ-1 ಟೇಬಲ್ ಸ್ಪೂನ್ ನಷ್ಟು, ಕರಿಬೇವು-ಸ್ವಲ್ಪ, ನೀರು-ಅಗತ್ಯವಿರುವಷ್ಟು.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ನಂತರ ಸಾಸಿವೆ ಹಾಕಿ, ಚಟಪಟ ಎಂದಾಗ ಕಡಲೆಬೇಳೆ, ಉದ್ದಿನಬೇಳೆ ಹಾಕಿ. ಇದು ಕೆಂಪಗಾದ ನಂತರ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಕೈಯಾಡಿಸಿ. 5 ನಿಮಿಷ ಕಡಿಮೆ ಉರಿಯಲ್ಲಿ ಈರುಳ್ಳಿಯನ್ನು ಬೇಯಿಸಿಕೊಳ್ಳಿ.
ನಂತರ ಒಂದು ಮಿಕ್ಸಿ ಜಾರಿಗೆ ಹುರಿಕಡಲೆ, ಬೆಳ್ಳುಳ್ಳಿ, ಜೀರಿಗೆ, ಹಸಿಮೆಣಸು, ತೆಂಗಿನ ತುರಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಈರುಳ್ಳಿ ಬೆಂದ ಕೂಡಲೇ ಅದಕ್ಕೆ ಕತ್ತರಿಸಿಟ್ಟುಕೊಂಡ ಟೊಮೆಟೊ ಹಾಕಿ.ಟೊಮೆಟೊ ಮೆತ್ತಗಾದ ನಂತರ ಹುಣಸೇ ಹಣ್ಣಿನ ನೀರು ಹಾಕಿ. ಅದಕ್ಕೆ ಅರಿಶಿನ, ಸಾರಿನಪುಡಿ, ರುಬ್ಬಿಕೊಂಡ ಮಿಶ್ರಣ, ½ ಕಪ್ ನಷ್ಟು ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಂಡರೆ ರುಚಿಕರವಾದ ಈರುಳ್ಳಿ ಗೊಜ್ಜು ರೆಡಿ.