ಈಗಾಗಲೇ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ನೆರೆರಾಷ್ಟ್ರ ಪಾಕಿಸ್ತಾನ ಈಗ ಮತ್ತೊಂದು ಬಿಕ್ಕಟ್ಟು ಎದುರಿಸುತ್ತಿದೆ. ದೇಶದಲ್ಲಿ ತೀವ್ರ ವಿದ್ಯುತ್ ಕ್ಷಾಮ ತಲೆದೋರಿದ್ದು, ಹೀಗಾಗಿ ದೇಶದಾದ್ಯಂತ ರಾತ್ರಿ 8: 30 ರ ಬಳಿಕ ಯಾವುದೇ ವ್ಯಾಪಾರ ವಹಿವಾಟು ನಡೆಸುವಂತಿಲ್ಲ ಎಂದು ತಿಳಿಸಲಾಗಿದೆ. ವಿದ್ಯುತ್ ಉಳಿತಾಯ ಮಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ 8.30 ರ ವೇಳೆಗೆ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮನೆ ಸೇರಿಕೊಳ್ಳಬೇಕಿದೆ.
ವಿವಾಹ ಸಮಾರಂಭಗಳಿಗೂ ನಿರ್ಬಂಧ ಹೇರಲಾಗಿದ್ದು, ರಾತ್ರಿ ಹತ್ತು ಗಂಟೆಯ ನಂತರ ಸಮಾರಂಭ ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ ಶನಿವಾರದಂದು ಸರ್ಕಾರಿ ಕಚೇರಿಗಳಿಗೆ ಕಡ್ಡಾಯ ರಜೆಯನ್ನು ಘೋಷಿಸಲಾಗಿದ್ದು, ಹೀಗಾಗಿ ಪಾಕಿಸ್ತಾನದಲ್ಲಿ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನ ಮಾತ್ರ ಕಾರ್ಯ ನಿರ್ವಹಿಸಲಿವೆ.
ಪ್ರಸ್ತುತ ದಿನನಿತ್ಯ 4 ಗಂಟೆಗಳಿಗೂ ಹೆಚ್ಚು ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಪ್ರಧಾನಿ ಶಹಬಾಜ್ ಶರೀಫ್, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ್ದು ವಿದ್ಯುತ್ ಬಳಕೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.