ಕೊರೊನಾ ಮಹಾಮಾರಿಯಿಂದಾಗಿ ಹಲವು ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅದರಲ್ಲಿಯೂ ಪಕ್ಕದ ಶ್ರೀಲಂಕಾ ಪರಿಸ್ಥಿತಿಯಂತೂ ಹೇಳತೀರದಾಗಿದೆ.
ಶ್ರೀಲಂಕಾ ರಾಷ್ಟ್ರವು ವರ್ಷಕ್ಕೆ 75 ಸಾವಿರ ಕೋಟಿ ವಿದೇಶಿ ಸಾಲ ಪಾವತಿಸಬೇಕು. ಇದರೊಂದಿಗೆ ದೇಶೀಯ ಸಾಲ ಕೂಡ ಇದೆ. ಆರ್ಥಿಕ ಕ್ರೂಢೀಕರಣಕ್ಕೆ ಶ್ರೀಲಂಕಾ ನಂಬಿದ್ದ ಪ್ರವಾಸೋದ್ಯಮ ಈಗ ಕೈ ಕೊಟ್ಟಿದೆ. ಕೊರೊನಾ, 2019ರಲ್ಲಿ ನಡೆದ ಚರ್ಚ್ ದಾಳಿ ಸೇರಿದಂತೆ ಹಲವು ಕಾರಣಗಳಿಂದಾಗಿ ಪ್ರವಾಸಿಗರ ಸಂಖ್ಯೆ ಸ್ಥಗಿತಗೊಂಡಿದೆ. ಈ ನಿಟ್ಟಿನಲ್ಲಿ ವಿದೇಶಿ ವಿನಿಮಯ ಸಂಗ್ರಹವಿಲ್ಲದೆ ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿದೆ.
ಹೀಗಾಗಿಯೇ ಅಲ್ಲಿನ ವಿದೇಶೀ ವಿನಿಮಯ ಸದ್ಯ 1,587 ಮಿಲಿಯನ್ ಅಥವಾ ಒಂದು ತಿಂಗಳ ಆಮದಿನಷ್ಟು ಇಳಿಕೆಯಾಗಿದೆ. ಇನ್ನೂ ಒಂದು ತಿಂಗಳಲ್ಲಿ ಅಂದರೆ ಜನವರಿಯಲ್ಲಿ ಶ್ರೀಲಂಕಾವು 500 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಕಟ್ಟಬೇಕು. ಮತ್ತೆ ಜೂನ್ ತಿಂಗಳಲ್ಲಿ ಅಷ್ಟೇ ಮೊತ್ತದ ಸಾಲ ತೀರಿಸಬೇಕು. ಸದ್ಯ ಶ್ರೀಲಂಕಾದ 200 ರುಪಿ, ಅಮೆರಿಕದ 1 ಡಾಲರ್ ಗೆ ಸಮವಾಗಿದೆ.
ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಶ್ರೀಲಂಕಾ ಈ ಕ್ಷೇತ್ರದಲ್ಲಿ 30 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಸದ್ಯ ಪ್ರವಾಸೋದ್ಯಮ ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗುತ್ತಿದೆ. ಹೀಗಾಗಿ ಶ್ರೀಲಂಕಾ ಆರ್ಥಿಕತೆಯ ವಿಚಾರದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.