ಪ್ರತಿಯೊಬ್ಬ ವ್ಯಕ್ತಿಗೂ ಒಳ್ಳೆ ಹವ್ಯಾಸದ ಜೊತೆ ಕೆಟ್ಟದೊಂದು ಹವ್ಯಾಸ ಇದ್ದೇ ಇರುತ್ತದೆ. ಇದೇ ಹವ್ಯಾಸ ಆತನ ಅವನತಿಗೆ ಕಾರಣವಾಗುತ್ತದೆ. ಮನು ಸ್ಮೃತಿಯಲ್ಲಿ ಕೆಟ್ಟ ಹವ್ಯಾಸದ ಬಗ್ಗೆ ಹೇಳಲಾಗಿದೆ. ಯಾವ ಹವ್ಯಾಸದಿಂದ ಏನೆಲ್ಲ ಕಷ್ಟ ಎದುರಿಸಬೇಕಾಗುತ್ತದೆ ಎಂಬುದನ್ನು ಹೇಳಲಾಗಿದೆ. ಪ್ರಾಚೀನ ಕಾಲದಲ್ಲಿ ಈಗಿನ ಕೆಲ ಒಳ್ಳೆ ಹವ್ಯಾಸ ಕೂಡ ಕೆಟ್ಟ ಚಟದ ಸಾಲಿಗೆ ಸೇರಿತ್ತು.
ತಿಳಿದೂ ತಿಳಿದೂ ತಪ್ಪು ಮಾಡಬಾರದು ಎನ್ನುತ್ತಾರೆ. ಈಗಿನ ಜನಕ್ಕೆ ಯಾವುದು ತಪ್ಪು, ಯಾವುದು ಸರಿ ಎನ್ನುವುದು ಗೊತ್ತಿದೆ. ಆದ್ರೂ ತಪ್ಪು ಮಾಡಿ ಸಂಕಷ್ಟ ತಂದುಕೊಳ್ತಾರೆ. ಜೂಜಾಡುವುದು ಒಂದು ಕೆಟ್ಟ ಹವ್ಯಾಸ. ಚಿಕ್ಕ ಹುಡುಗರಿಗೂ ಇದು ಗೊತ್ತು. ಆದ್ರೂ ಚಟಕ್ಕೆ ಬಿದ್ದು ಹಾಳಾಗ್ತಾರೆ. ಈ ಚಟವುಳ್ಳ ವ್ಯಕ್ತಿಯೊಂದೇ ಅಲ್ಲ ಆತನ ಕುಟುಂಬವೇ ಸರ್ವನಾಶವಾಗುತ್ತದೆ ಎಂದು ಮನುಸ್ಮೃತಿಯಲ್ಲಿಯೂ ಹೇಳಲಾಗಿದೆ.
ಕಾಮದ ಬಗ್ಗೆ ಯೋಚನೆ ಮಾಡುವುದು ಒಳಿತಲ್ಲ. ಕೆಲವರು ಹಗಲಿನಲ್ಲಿಯೂ ಇದರ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಈ ರೀತಿ ಯೋಚನೆ ಮಾಡುವವರು ಎಂದೂ ಉದ್ಧಾರವಾಗುವುದಿಲ್ಲ.
ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದು ಒಳ್ಳೆಯದಲ್ಲ. ಕೆಲವರು ಬೇರೆಯವರಿಗೆ ಕೆಟ್ಟದಾಗಲೆಂದು ಬಯಸುತ್ತಿರುತ್ತಾರೆ. ಅಂತವರಿಗೆ ಎಂದೂ ಒಳ್ಳೆಯದಾಗುವುದಿಲ್ಲ.
ಪರಸ್ತ್ರೀ ಜೊತೆ ಇರುವ ವ್ಯಕ್ತಿಯ ದೇಹ ಹಾಗೂ ಕೀರ್ತಿ ಎರಡೂ ಹಾಳಾಗುತ್ತದೆ. ಆತ ಹಾಗೂ ಆತನ ಕುಟುಂಬವನ್ನು ಸಮಾಜ ಕೆಟ್ಟದಾಗಿ ನೋಡುತ್ತದೆ.
ಮದ್ಯಪಾನ ಕೂಡ ಕೆಟ್ಟ ಚಟ. ಈ ಅಭ್ಯಾಸವುಳ್ಳ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ನಿಂದನೆಗೆ ಒಳಗಾಗುತ್ತಾನೆ. ಆತನ ಕುಟುಂಬ ಸಾಕಷ್ಟು ಕಷ್ಟ ಎದುರಿಸಬೇಕಾಗುತ್ತದೆ ಎಂದು ಮನುಸ್ಮೃತಿ ಹೇಳಿದೆ.
ಅರ್ಥಹೀನವಾಗಿ ನೃತ್ಯ ಮಾಡುವುದು ಒಳ್ಳೆಯದಲ್ಲ ಎನ್ನುತ್ತದೆ ಮನುಸ್ಮೃತಿ. ಸಮಾಜದಲ್ಲಿ ಇಂತ ವ್ಯಕ್ತಿಗೆ ಮನ್ನಣೆ ಸಿಗುವುದಿಲ್ಲ. ಆದ್ರೆ ಈಗಿನ ಕಾಲದಲ್ಲಿ ಇದನ್ನು ಕಲೆಯೆಂದು ಗೌರವಿಸಲಾಗುತ್ತದೆ.
ಪ್ರಾಚೀನ ಕಾಲದಲ್ಲಿ ಕರ್ತವ್ಯ ಬಿಟ್ಟು ಕವನ ಬರೆಯುವುದು, ಹಾಡುವುದನ್ನು ಕೆಟ್ಟ ಚಟವೆಂದು ಪರಿಗಣಿಸಲಾಗಿತ್ತು. ಆದ್ರೀಗ ಸಮಾಜ ಬದಲಾಗಿದೆ.
ಯಾವುದೇ ಕೆಲಸವಿಲ್ಲದೆ ಅಲ್ಲಿ- ಇಲ್ಲಿ ತಿರುಗಾಡುವುದು ಕೂಡ ಕೆಟ್ಟ ಚಟದ ಸಾಲಿಗೆ ಸೇರುತ್ತದೆ. ಸಮಾಜಕ್ಕಾಗಲಿ ಇಲ್ಲ ಕುಟುಂಬಕ್ಕಾಗಲಿ ಕೆಲಸ ಮಾಡುವುದಿಲ್ಲ. ಜೀವನದಲ್ಲಿ ಯಾವುದೇ ಗುರಿ ಇಲ್ಲದೆ ಬದುಕುತ್ತಾರೆ. ಹಾಗಾಗಿ ಇಂತ ಕೆಟ್ಟ ಚಟದಿಂದ ದೂರವಿರಬೇಕೆಂದು ಮನುಸ್ಮೃತಿ ಹೇಳಿದೆ.