ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ತಾಲಿಬಾನ್ ನ ಆಂತರಿಕ ಸಚಿವ ಹಾಗೂ ಹಕ್ಕಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ, ಪಾಕಿಸ್ತಾನದ ರಾಯಭಾರಿಯನ್ನೇ ನಿರ್ಲಕ್ಷಿಸಿದ್ದಾನೆ.
ಮೋಸ್ಟ್ ವಾಂಟೆಡ್ ಉಗ್ರ ಸಿರಾಜುದ್ದೀನ್ ಹಕ್ಕಾನಿ ಕಾಬೂಲ್ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪೊಲೀಸ್ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಅಲ್ಲಿಂದ ಹೊರಟಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಪಾಕಿಸ್ತಾನದ ರಾಯಭಾರಿ ಮನ್ಸೂರ್ ಅಹ್ಮದ್ ಖಾನ್, ಕುರ್ಚಿಯಿಂದೆದ್ದು, ತಾಲಿಬಾನ್ ಮುಖಂಡನಿಗೆ ನಮಸ್ಕಾರ ಮಾಡಲು ಮುಂದಾಗಿದ್ದಾನೆ. ಭಯದಲ್ಲೇ ಎದ್ದು ನಿಂತಿದ್ದಾನೆ. ಆದ್ರೆ ಸಿರಾಜುದ್ದೀನ್, ಪಾಕ್ ಅಧಿಕಾರಿಯನ್ನು ನಿರ್ಲಕ್ಷಿಸಿ ಅಲ್ಲಿಂದ ತೆರಳಿದ್ದಾನೆ. ತಾಲಿಬಾನ್ ಹಾಗೂ ಪಾಕ್ ಸೇನೆ ನಡುವಣ ಬಿಕ್ಕಟ್ಟಿಗೆ ಇದು ಸಾಕ್ಷಿಯಾಗಿದೆ.
ಹಕ್ಕಾನಿ ಸಂಘಟನೆಯ ಮುಖ್ಯಸ್ಥ ಸಿರಾಜುದ್ದೀನ್, ಪಾಕಿಸ್ತಾನದ ಉತ್ತರ ವಜಿರಿಸ್ತಾನ ಮೂಲದವನು. ಹಕ್ಕಾನಿ ಸಂಘಟನೆ ಹಲವು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದೆ. 2012ರಲ್ಲಿ ಹಕ್ಕಾನಿ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲಾಗಿತ್ತು.
ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡ ಬಳಿಕ ಸಿರಾಜುದ್ದೀನ್ ನನ್ನು ಆಂತರಿಕ ಸಚಿವನಾಗಿ ನೇಮಕ ಮಾಡಿತ್ತು. ಸಿರಾಜುದ್ದೀನ್ ಹಕ್ಕಾನಿಯ ತಲೆ ತಂದುಕೊಟ್ಟವರಿಗೆ 10 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಈಗಾಗಲೇ ಎಫ್ ಬಿ ಐ ಘೋಷಣೆ ಮಾಡಿದೆ.