ಶಿಕ್ಷಣ ವ್ಯವಸ್ಥೆ ಮೇಲೆ ತಾಲಿಬಾನ್ ನಿರ್ಬಂಧಗಳ ನಡುವೆಯೇ ಕಾಬೂಲ್ನ ಮಹಿಳೆಯು ಸೋದಾ ನಜಂದ್, ಬೀದಿ ವ್ಯಾಪಾರಿಗಳ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ.
ಹೈಸ್ಕೂಲ್ ವ್ಯಾಸಂಗ ಮುಗಿಸಿರುವ ನಜಂದ್, ಕಾಬೂಲ್ನ ಪಾರ್ಕ್ಗಳಲ್ಲಿ ದಿನಕ್ಕೆ ಮೂರು ಗಂಟೆಗಳ ಕಾಲ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ನಜಂದ್, ನಾನು ಮೊದಲು ಅವರಿಗೆ Dari ಯನ್ನು ಕಲಿಸಲು ಆರಂಭಿಸಿದೆ. ಅವರಿಗೆ ಓದುವುದು ಹೇಗೆಂದು ಕಲಿಸಿದೆ. ಬಳಿಕ ಅವರಿಗೆ ಹಂತ ಹಂತವಾಗಿ ಗಣಿತ ಹಾಗೂ ಕುರಾನ್ನ್ನು ಕಲಿಸುತ್ತಿದ್ದೇನೆ. ಮಕ್ಕಳು ಈಗ ಇಂಗ್ಲೀಷ್ ಕಲಿಯಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.
ಈ ಎಲ್ಲಾ ಮಕ್ಕಳು ಮೊದಲು ಭಿಕ್ಷೆ ಬೇಡುತ್ತಿದ್ದರು. ಆದರೆ ನಾನು ಅವರಿಗೆ ಭಿಕ್ಷೆ ಬೇಡುವುದನ್ನು ನಿಲ್ಲಿಸಿ ಶಿಕ್ಷಣ ಕಲಿಯುವಂತೆ ಪ್ರೇರೇಪಿಸಿದೆ. ಇಂತಹ ಕಠಿಣ ಸಂದರ್ಭಗಳಲ್ಲಿ ಒಬ್ಬರನ್ನು ಪ್ರೋತ್ಸಾಹಿಸುವುದು ನಿಜಕ್ಕೂ ಪ್ರಮುಖ ವಿಚಾರವಾಗಿದೆ ಎಂದು ನಜಂದ್ ಹೇಳಿದರು.
ಮಕ್ಕಳಿಗೂ ಕೂಡ ಇದೀಗ ಶಿಕ್ಷಣದ ಬಗ್ಗೆ ವಿಪರೀತ ಆಸಕ್ತಿ ಮೂಡಿದೆ. ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಅವಶ್ಯಕತೆ ಇದೆ ಎಂಬುದು ಮಕ್ಕಳ ಅರಿವಿಗೆ ಬಂದಿದೆ. 30ಕ್ಕೂ ಅಧಿಕ ಮಕ್ಕಳಿಗೆ ನಜಂದ್, ಶಿಕ್ಷಣವನ್ನು ನೀಡುತ್ತಾರೆ.