ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತೀವ್ರಸ್ವರೂಪ ಪಡೆದುಕೊಂಡಿದ್ದು, ನಾಳೆ ವಿವಿಧ ಸಂಘಟನೆಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ಚಿಂತಕರು ಪ್ರತಿಭಟನೆ ನಡೆಸಲಿದ್ದು, ಈ ನಡುವೆ ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಸ್ಥಾನಕ್ಕೆ ನಾಡೋಜ ಡಾ.ಹಂಪ ನಾಗರಾಜಯ್ಯ ರಾಜೀನಾಮೆ ನೀಡಿದ್ದಾರೆ.
ನಾಡಗೀತೆಗೆ ಅಪಮಾನ ಮಾಡಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಬೇಸರಗೊಂಡು ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಸ್ಥಾನಕ್ಕೆ ಹಂಪಾ ನಾಗರಾಜಯ್ಯ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ನಾಡಗೀತೆಯನ್ನೇ ತಿರುಚಿ ರೋಹಿತ್ ಚಕ್ರತೀರ್ಥ ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹಂಪಾ ನಾಗರಾಜಯ್ಯ ಪತ್ರ ಬರೆದಿದ್ದರು. ಆದರೆ ಈವರೆಗೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಇದೆ ವಿಚಾರವಾಗಿ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.