ಅಹಮದಾಬಾದ್: ಗುಜರಾತ್ ಹೈಕೋರ್ಟ್‌ನ ಪ್ಯೂನ್ ನೇಮಕಾತಿ ಪರೀಕ್ಷೆಗೆ ಮಹಿಳೆಯೊಬ್ಬರು ಆರು ತಿಂಗಳ ಮಗುವಿನ ಜೊತೆ ಹಾಜರಾಗಿದ್ದರು.
ಮಹಿಳೆ ಪರೀಕ್ಷೆ ಬರೆಯುತ್ತಿದ್ದಾಗ ಅಹಮದಾಬಾದ್ ಪೊಲೀಸ್ ಮಹಿಳಾ ಪೇದೆಯೊಬ್ಬರು ಅವರ ಮಗುವನ್ನು ನೋಡಿಕೊಂಡಿದ್ದಾರೆ. ಅಹಮದಾಬಾದ್ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಮಹಿಳಾ ಪೇದೆ ಮಗುವನ್ನು ಹಿಡಿದುಕೊಂಡು ಆಟವಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಭಾನುವಾರ ಗುಜರಾತ್ ಹೈಕೋರ್ಟ್‌ನ ಪ್ಯೂನ್ ಹುದ್ದೆಗೆ ಪರೀಕ್ಷೆ ನಡೆದಿತ್ತು.
ಮಹಿಳೆಯೊಬ್ಬರು ತನ್ನ 6 ತಿಂಗಳ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ಆರಂಭವಾಗಬೇಕಿತ್ತು. ಈ ವೇಳೆ ಮಗು ಸಿಕ್ಕಾಪಟ್ಟೆ ಅಳುತ್ತಿತ್ತು.
ಮಗು ಅಳುತ್ತಿದ್ದುದನ್ನು ಕಂಡ ಪೊಲೀಸ್ ಪೇದೆ ದಯಾ ಬೆನ್ ಕೂಡಲೇ ಮಗುವನ್ನು ಕೈಗೆತ್ತಿಕೊಂಡಿದ್ದಾರೆ. ನೀವು ಪರೀಕ್ಷೆ ಬರೆಯಿರಿ, ನಾನು ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಬಳಿಕ ಮಗುವನ್ನು ತಾವೇ ಆರೈಕೆ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳಾ ಪೊಲೀಸ್ ಪೇದೆಯ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.