ಮಮ್ತಾಜ್‌ಳ ನೆನಪಿಗಾಗಿ ಷಹಜಹಾನ್ ನಿರ್ಮಿಸಿದ ತಾಜ್ ಮಹಲ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ತಾಯಿಯ ನೆನಪಿನಲ್ಲಿ ಮಗನೊಬ್ಬ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಾಜ್ ಮಹಲ್ ಮಾದರಿಯ ಕಟ್ಟಡ ನಿರ್ಮಿಸಿದ್ದಾನೆ. ಇದು ತಮಿಳುನಾಡಿನ ತಿರುವಾರೂರಿನಲ್ಲಿದೆ. ಅಮರುದ್ದೀನ್ ಶೇಖ್ ದಾವೂದ್ ಎಂಬ ವ್ಯಕ್ತಿ ತನ್ನ ತಾಯಿಯ ನೆನಪಿಗಾಗಿ ತಾಜ್ ಮಹಲ್ ಮಾದರಿಯ ಕಟ್ಟಡವನ್ನು ನಿರ್ಮಿಸಿದ್ದಾನೆ. 2020 ರಲ್ಲಿ ಅಮರುದ್ದೀನ್ ತಾಯಿ, ಜೈಲಾನಿ ಬೀವಿ ಅನಾರೋಗ್ಯದಿಂದ ನಿಧನರಾದರು.
ಆತನಿಗೆ ತಾಯಿಯೇ ಸರ್ವಸ್ವ. ಈ ಆಘಾತದಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. 1989 ರಲ್ಲಿ ಅಮರುದ್ದೀನ್ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಬಳಿಕ ತಾಯಿಯೇ ಐವರು ಮಕ್ಕಳನ್ನು ಬೆಳೆಸಿದ್ದರು. ಪತಿ ತೀರಿಕೊಂಡಾಗ ಜೈಲಾನಿ ಬೀವಿಗೆ ಕೇವಲ 30 ವರ್ಷ. ಆದರೂ ಆಕೆ ಮರು ಮದುವೆಯಾಗಲಿಲ್ಲ. ಕುಟುಂಬಕ್ಕಾಗಿ ಆಕೆ ಎಲ್ಲಾ ತ್ಯಾಗವನ್ನು ಮಾಡಿದರು. 2020ರಲ್ಲಿ ತಾಯಿ ನಿಧನರಾದಾಗ ಅಮರುದ್ದೀನ್ ಆಘಾತಕ್ಕೊಳಗಾಗಿದ್ದರು. ತಾಯಿ ತಮ್ಮೊಂದಿಗೇ ಇದ್ದಾರೆಂದು ಅವರಿಗೆ ಅನಿಸುತ್ತಿತ್ತು.
ತಿರುವಾರೂರಿನಲ್ಲಿದ್ದ ಸ್ವಂತ ಜಮೀನಿನಲ್ಲಿಯೇ ಆತ ತಾಯಿಯ ಶವವನ್ನು ಹೂಳಿದ್ದರು. ಇದಾದ ನಂತರ ಅಮರುದ್ದೀನ್ ತಾಯಿಯ ನೆನಪಿಗಾಗಿ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಿದ್ರು. ತಾಜ್ ಮಹಲ್ ಮಾದರಿಯಲ್ಲೇ ಈ ಕಟ್ಟಡ ಮೂಡಿ ಬಂದಿದೆ. 2021ರ ಜೂನ್ 3ರಂದು ಕಾಮಗಾರಿ ಪ್ರಾರಂಭವಾಗಿತ್ತು. 200 ಕ್ಕೂ ಹೆಚ್ಚು ಜನರು ಒಂದು ಎಕರೆ ಭೂಮಿಯಲ್ಲಿ ಸುಮಾರು 8000 ಚದರ ಅಡಿ ವಿಸ್ತೀರ್ಣದಲ್ಲಿ ತಾಜ್ ಮಹಲ್ ಮಾದರಿಯ ರಚನೆಯನ್ನು ನಿರ್ಮಿಸಿದ್ದಾರೆ. ಈ ಕಟ್ಟಡ ನಿರ್ಮಾಣಕ್ಕೆ ಸುಮಾರು 5.5 ಕೋಟಿ ರೂಪಾಯಿ ಖರ್ಚಾಗಿದೆ. ತಾಯಿ ಕೂಡಿಟ್ಟ ಹಣದಿಂದಲೇ ಅಮರುದ್ದೀನ್ ತಾಜ್ ಮಹಲ್ ಅನ್ನು ನಿರ್ಮಿಸಿದ್ದಾರೆ. ಈಗ ಕಟ್ಟಡ ಮತ್ತು ಭೂಮಿಯನ್ನು ಚಾರಿಟೇಬಲ್ ಟ್ರಸ್ಟ್‌ಗೆ ನೀಡಲಾಗಿದೆ.