ಹುಬ್ಬಳ್ಳಿ: ಆ ಕಳ್ಳನ ಕೈ ಚಳಕದಿಂದ ಅವಳಿ ನಗರಗಳು ಬೆಚ್ಚಿ ಬಿದ್ದದ್ದವು. ಕಳ್ಳನಿಗಾಗಿ ಬಲೆ ಬೀಸಿದ್ದ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ, ಹೌದು ನಿರಂತರವಾಗಿ ಸಿನಿಮಿಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಉಪ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಚಂದ್ರ ಬಡಫಕೀರಪ್ಪ ಯಶಸ್ವಿಯಾಗಿದ್ದಾರೆ.
ರವಿಚಂದ್ರ ಅವರ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದರು. ತಾಯಿ ಸಾವನ್ನಪ್ಪಿದ ಮೂರು ದಿನದ ನೋವಿನಲ್ಲೇ ರವಿಚಂದ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಕಾರಣ ಈ ಕಳ್ಳನ ಕೈ ಚಳಕದಿಂದ ನಗರ ಬೇಸತ್ತಿತ್ತು. ಮನಸಲ್ಲಿ ನೋವಿದ್ದರೂ ಕಳ್ಳನನ್ನು ಹಿಡಿಯಲೇ ಬೇಕು ಅಂತ ಕರ್ತವ್ಯಕ್ಕೆ ಹಾಜರಾಗಿ ಬಳ್ಳಾರಿ ಮೂಲದ ಶ್ರೀಕಾಂತ ಎಂಬ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟು ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನಿಂದ 6,95,000 ಮೌಲ್ಯದ 165 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿ, 30 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ಪೊಲೀಸರ ಈ ಕಾರ್ಯ ಜೊತೆಗೆ ರವಿಚಂದ್ರ ಅವರ ಶ್ರಮಕ್ಕೆ ಮೆಚ್ಚಿ ಪೊಲೀಸ್ ಆಯುಕ್ತ ಲಾಬೂರಾಮ್ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಳ್ಳತನ ಮಾಡುತ್ತಿದ್ದವನನ್ನು ಪೊಲೀಸರು ಇದೀಗ ಬಂಧಿಸಿ ಸೆರೆ ಮನೆಗೆ ಅಟ್ಟಿದ್ದಾರೆ.