ಅಪ್ರಾಪ್ತೆ ವಿದ್ಯಾರ್ಥಿನಿ ಮೇಲೆ ಶಾಲಾ ಶಿಕ್ಷಕನೇ ಅತ್ಯಾಚಾರ ಎಸಗಿದ ದಾರುಣ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಸಂಭವಿಸಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 11 ವರ್ಷದ ಸಂತ್ರಸ್ತೆ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಶಾಲೆಗೆ ತೆರಳಿದ್ದ ಬಾಲಕಿಯು ಮನೆಗೆ ವಾಪಸ್ಸಾಗಿರಲಿಲ್ಲ. ಇದರಿಂದ ಆತಂಕಗೊಂಡ ಬಾಲಕಿಯ ತಾಯಿ ಮಗಳನ್ನು ಹುಡುಕುತ್ತಾ ಶಾಲೆಯ ಕಡೆ ತೆರಳಿದ್ದರು.
ಈ ವೇಳೆಯಲ್ಲಿ ತಾಯಿಗೆ ಕೊಠಡಿಯ ಒಳಗೆ ಮಗಳು ಅಳುತ್ತಿರುವ ಧ್ವನಿ ಕೇಳಿ ಬಂದಿದೆ. ಕೊಠಡಿಯ ಬಾಗಿಲನ್ನು ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಕೊಠಡಿಯ ಬಾಗಿಲನ್ನು ತೆರೆದು ನೋಡುತ್ತಿದ್ದಂತೆಯೇ ತಾಯಿಗೆ ಶಾಕ್ ಕಾದಿತ್ತು. ಶಾಲಾ ಶಿಕ್ಷಕ ಪುತ್ರಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದುದನ್ನು ತಾಯಿ ಕಣ್ಣಾರೆ ಕಂಡಿದ್ದಾರೆ. ಬಾಲಕಿಯ ತಾಯಿಯನ್ನು ನೋಡುತ್ತಿದ್ದಂತೆಯೇ ಶಿಕ್ಷಕ ಆಕೆಯನ್ನು ತಳ್ಳಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಇದಾದ ಬಳಿಕ ತಾಯಿಯ ಬಳಿ ಧಾವಿಸಿ ಬಂದ ಮಗಳು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇದಾದ ಬಳಿಕ ಪೊಲೀಸ್ ಠಾಣೆಗೆ ತೆರಳಿದ ತಾಯಿ ಹಾಗೂ ಮಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.