
ತಾಯಿ-ಮಗುವಿನ ಬಾಂಧವ್ಯ ವರ್ಣಿಸಲು ಪದಗಳೇ ಸಾಕಾಗುವುದಿಲ್ಲ. ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಮೃಗಗಳಿಗೂ ಭಾವನೆಗಳಿರುತ್ತವೆ. ಅವುಗಳು ಕೂಡ ತಮ್ಮ ಕರುಳಬಳ್ಳಿಯೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹುಲಿ ಮರಿ ತನ್ನ ತಾಯಿಯನ್ನು ಮುದ್ದಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಹೇಗೆ ಪುಟ್ಟ ಮಗುವು ತನ್ನ ಪ್ರೀತಿಯನ್ನು ತಾಯಿಯ ಮೇಲೆ ತೋರ್ಪಡಿಸುತ್ತದೋ ಅದೇ ರೀತಿ ಇಲ್ಲಿ ಹುಲಿ ಮರಿ ತನ್ನ ತಾಯಿಯನ್ನು ಅಪ್ಪಿ ಮುದ್ದಾಡಿದೆ.
ಈ ಸುಂದರ ಹಾಗೂ ಬಲು ಅಪರೂಪದ ವಿಡಿಯೋವನ್ನು ಪ್ರಶಸ್ತಿ ವಿಜೇತ ನಿರ್ದೇಶಕ, ನಿರ್ಮಾಪಕ ಮತ್ತು ಛಾಯಾಗ್ರಾಹಕ ಸುಬ್ಬಯ್ಯ ನಲ್ಲಮುತ್ತು ಅವರು ಸೆರೆಹಿಡಿದಿದ್ದಾರೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಾಮನ್ ಅವರು ಪೋಸ್ಟ್ ಮಾಡಿದ್ದಾರೆ.
ನಲ್ಲಮುತ್ತು ಅವರು ಡಿಸೆಂಬರ್ 31, 2020 ರಂದು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಹದಿನಾಲ್ಕು ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಹುಲಿಗಳ ಅದ್ಭುತ ದೃಶ್ಯ ಸೆರೆಹಿಡಿದಿದ್ದಾಗಿ ಅವರು ತಿಳಿಸಿದ್ದಾರೆ.
ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಹುಲಿ ಹಾಗೂ ಅದರ ಮರಿ ಹಂಚಿಕೊಂಡಿರುವ ಬಾಂಧವ್ಯ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಇದು ಪ್ರಕೃತಿಯ ನಿಜವಾದ ಸೌಂದರ್ಯ ಎಂದು ವರ್ಣಿಸಿದ್ದಾರೆ.