ಪ್ರತಿಯೊಬ್ಬ ಮಹಿಳೆಗೂ ತಾನು ತಾಯಿಯಾಗುವುದು ಅತ್ಯಂತ ಸಂತೋಷದ ಘಳಿಗೆ. ಇದಕ್ಕಾಗಿ ಆಕೆ ಒಂಭತ್ತು ತಿಂಗಳು ಜಾತಕ ಪಕ್ಷಿಯಂತೆ ಕಾಯ್ತಾಳೆ. ಕರುಳ ಕುಡಿಯನ್ನು ಎದೆಗೊತ್ತಿಕೊಳ್ಳುವ ವಿಶಿಷ್ಟ ಅನುಭೂತಿಗಾಗಿ ನಿರೀಕ್ಷೆ ಮಾಡ್ತಾಳೆ. ಆದ್ರೆ ಇಲ್ಲೊಬ್ಬ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ತಾನು ಗರ್ಭಿಣಿ ಅನ್ನೋದೇ ಗೊತ್ತಿರಲಿಲ್ಲ ಅಂತಾ ವಿಚಿತ್ರ ಹೇಳಿಕೆ ನೀಡಿದ್ದಾಳೆ.
ವೇಲ್ಸ್ ನಿವಾಸಿ ನಿಕೋಲಾ ಥಾಮಸ್ ಎಂಬ ಮಹಿಳೆಗೆ ಬೆಳಗಿನ ಜಾವ 3 ಗಂಟೆಗೆ ಎಚ್ಚರವಾಗಿದೆಯಂತೆ, ಅದೇ ಸಮಯಕ್ಕೆ ಹೆರಿಗೆ ನೋವು ಶುರುವಾಗಿದ್ದು, ಮಗು ಜನಿಸಿದೆ. ಆದ್ರೆ ತಾನು ಗರ್ಭಿಣಿ ಅನ್ನೋದೇ ಅವಳಿಗೆ ತಿಳಿದಿರಲಿಲ್ಲವಂತೆ. ರಾತ್ರಿ ಮಲಗುವಾಗಲೇ ಅವಳಿಗೆ ಸಣ್ಣಗೆ ಹೊಟ್ಟೆ ನೋವು ಶುರುವಾಗಿತ್ತಂತೆ, ಹಾಗಾಗಿ ಸರಿಯಾಗಿ ನಿದ್ದೆ ಕೂಡ ಬಂದಿರಲಿಲ್ಲ.
36ರ ಹರೆಯದ ನಿಕೋಲಾ ಮಲಗುವ ಮುನ್ನ ಪ್ಯಾರಸಿಟಮಾಲ್ ಮಾತ್ರೆ ಸೇವಿಸಿದ್ಲು. ಇದಾದ ನಂತರ ಮನೆಯ ನಿತ್ಯದ ಕೆಲಸಗಳನ್ನು ಮಾಡಿ, ಬಟ್ಟೆ ಒಗೆದು ಮಕ್ಕಳನ್ನು ಮಲಗಿಸಲು ಹಾಸಿಗೆಗೆ ಕರೆದುಕೊಂಡು ಹೋದಳು. ನಂತರ ತಾನೂ ಮಲಗಿದ್ದಾಳೆ. ಬೆಳಗಿನ ಜಾವ 3 ಗಂಟೆಗೆ ಆಕೆ ಕನಸಿನಲ್ಲಿಯೂ ಊಹಿಸದ ಘಟನೆ ಸಂಭವಿಸಿದೆ. ಮಗಳು ಬಾತ್ ರೂಮಿಗೆ ಹೋಗಬೇಕೆಂದು ತಾಯಿ ನಿಕೋಲಾಳನ್ನು ಎಬ್ಬಿಸಿದ್ಲು.
ಈ ವೇಳೆ ನಿಕೋಲಾಗೆ ಹೊಟ್ಟೆ ನೋವು ತೀವ್ರವಾಗಿದ್ದು, ತನಗೆ ಹೆರಿಗೆ ಆಗಲಿದೆ ಅನ್ನೋದು ಅರಿವಿಗೆ ಬಂದಿದೆ. 14 ವರ್ಷದ ಹಿರಿಯ ಮಗಳು ಆಲಿಸ್, ತಾಯಿಗೆ ಸಹಾಯ ಮಾಡಿದ್ದಾಳೆ. ಹೊಟ್ಟೆಯ ಮೇಲೆ ಕೈಇಟ್ಟು ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳಲು ನಿಕೋಲಾ ಪ್ರಯತ್ನ ಮಾಡಿದ್ದಾಳೆ. ಅದೇ ಸಮಯಕ್ಕೆ ಮಗುವಿನ ತಲೆ ಹೊರಬರಲು ಪ್ರಾರಂಭಿಸಿದೆ. ಕೆಲ ಹೊತ್ತಿನಲ್ಲೇ ಮಗು ಜನಿಸಿದ್ದು, ಮಗುವಿನ ಹೊಕ್ಕುಳ ಬಳ್ಳಿಯೇನಾದ್ರೂ ಕುತ್ತಿಗೆಗೆ ಸಿಲುಕಿಕೊಂಡಿದೆಯಾ ಎಂದು ನಿಕೋಲಾ ಪರಿಶೀಲಿಸಿದ್ಲು.
ಮಗುವಿನ ಜನನದ ನಂತರ, ಆಂಬ್ಯುಲೆನ್ಸ್ ಮಹಿಳೆಯ ಮನೆಗೆ ತಲುಪಿದೆ. ವೈದ್ಯಕೀಯ ಸಿಬ್ಬಂದಿ ಕೂಡ ಈ ಹೆರಿಗೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಐದು ದಿನ ಆಸ್ಪತ್ರೆಯಲ್ಲಿದ್ದ ನಿಕೋಲಾ ಎಲ್ಲಾ ಅಗತ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಮಗುವಿನೊಂದಿಗೆ ಮನೆಗೆ ಮರಳಿದ್ದಾಳೆ.