ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವರುಣಾ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮೊಮ್ಮಗ 17 ವರ್ಷದ ಧವನ್ ರಾಕೇಶ್ ಅವರನ್ನು ಮುನ್ನೆಲೆಗೆ ತಂದಿದ್ದಾರಲ್ಲದೆ ಭಾಷಣದ ವೇಳೆ ಮೊಮ್ಮಗನ ರಾಜಕೀಯ ಆಕಾಂಕ್ಷೆಯನ್ನು ಬಿಚ್ಚಿಟ್ಟಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಜೆಡಿಎಸ್ ಕುಟುಂಬ ರಾಜಕಾರಣವನ್ನೇ ವಿರೋಧಿಸಿಕೊಂಡು ಬಂದ ಸಿದ್ದರಾಮಯ್ಯ, ಈಗ ಮಗನ ನಂತರ ಮೊಮ್ಮಗನನ್ನು ತಮ್ಮ ಉತ್ತರಾಧಿಕಾರಿಯಂತೆ ಬಿಂಬಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 17 ವರ್ಷದ ಮೊಮ್ಮಗ ಸದ್ಯಕ್ಕೆ ರಾಜಕೀಯ ಪ್ರವೇಶ ಇಲ್ಲವೆಂದು ಅವರು ಹೇಳಿದ್ದರೂ ಸಹ ಮುಂದೊಂದು ದಿನ ಧವನ್ ರಾಕೇಶ್ ರಾಜಕೀಯ ಪ್ರವೇಶವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.
ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು ಪರ – ವಿರೋಧದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡುತ್ತಿರುವವರು, ಮುಂದಿನ ದಿನಗಳಲ್ಲಿ ಧವನ್ ಒಂದು ವೇಳೆ ಚುನಾವಣೆಗೆ ಸ್ಪರ್ಧಿಸಿದರೆ ಅವರನ್ನು ಜನ ಆಯ್ಕೆ ಮಾಡಿದರೆ ಅದರಲ್ಲೇನು ತಪ್ಪು ಎಂದು ಹೇಳುತ್ತಿದ್ದಾರೆ. ವಿರೋಧ ಮಾಡುತ್ತಿರುವವರು, ಸಿದ್ದರಾಮಯ್ಯನವರ ಮೊಮ್ಮಗ ಎಂಬ ಕಾರಣಕ್ಕೆ ಧವನ್ ಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಆದರೆ ಇದೇ ವಿಚಾರ ಸಾಮಾನ್ಯ ಜನರಿಗೆ ಅನ್ವಯವಾಗುತ್ತದಾ ಎಂದು ಪ್ರಶ್ನಿಸುತ್ತಿದ್ದಾರೆ.
ಆದರೆ ಕುಟುಂಬ ರಾಜಕಾರಣ ಎಂಬುದು ಈಗ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯ ವಿಚಾರವಾಗಿದ್ದು, ಹೀಗಾಗಿ ಈ ಕುರಿತಂತೆ ಪಕ್ಷಗಳ ಸಾಮಾನ್ಯ ಕಾರ್ಯಕರ್ತರು ಮಾತನಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಪಕ್ಷದ ಕಾರ್ಯಕರ್ತರೇ ತಮ್ಮ ನಾಯಕರ ವಿರುದ್ಧ ತಿರುಗಿ ಬಿದ್ದರೆ ಅಚ್ಚರಿ ಏನಿಲ್ಲ.