ತಾಂಡಾ ಮತ್ತು ಹಟ್ಟಿಗಳಲ್ಲಿ ವಾಸಿಸುತ್ತಿರುವವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇವುಗಳಿಗೆ ಗ್ರಾಮ ಮನ್ನಣೆ ನೀಡುವುದರ ಜೊತೆಗೆ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡುವ ಯೋಜನೆ ಜಾರಿಗೊಳ್ಳಲಿದ್ದು, ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯನ್ನು ಪೈಲೆಟ್ ಆಗಿ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಅಡಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದು ರಾಜ್ಯದಲ್ಲಿ ಬಂಜಾರ ಸಮುದಾಯ ಹಾಗೂ ಕುರುಬ ಸಮುದಾಯದ ಹಲವರು ಸರ್ಕಾರಿ ಜಾಗದಲ್ಲಿ ಜೀವನ ಸಾಗಿಸುತ್ತಿದ್ದರೂ ಸಹ ಅವರುಗಳ ಹೆಸರಿನಲ್ಲಿ ಹಕ್ಕು ಪತ್ರಗಳು ಇಲ್ಲ. ಹೀಗಾಗಿ ಕಂದಾಯ ಗ್ರಾಮವನ್ನಾಗಿ ಮಾಡಿ ಹಕ್ಕು ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಇದರಿಂದ ಹಕ್ಕು ಪತ್ರ ಪಡೆದವರು ತಮ್ಮ ಮಕ್ಕಳಿಗೆ ಆಸ್ತಿ ಕೊಡಲು ಅನುಕೂಲವಾಗುತ್ತದೆ. ಕಲಬುರ್ಗಿ ಜಿಲ್ಲೆಯಿಂದ ಆರಂಭವಾಗಲಿರುವ ಈ ಯೋಜನೆಯಲ್ಲಿ 30,000ಕ್ಕೂ ಅಧಿಕ ಮಂದಿ ಫಲಾನುಭವಿಗಳಾಗುವ ಸಾಧ್ಯತೆ ಇದೆ. ಹೀಗಾಗಿ ಹಕ್ಕುಪತ್ರ ನೀಡಲು ಮುಖ್ಯಮಂತ್ರಿಯವರನ್ನು ಕರೆಸಿ ಗಿನ್ನಿಸ್ ದಾಖಲೆ ಆಗುವಂತೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.