ಬೀದರ್ : ಮನವಿ ಸ್ವೀಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ತಹಶೀಲ್ದಾರ್ ಮೇಲೆ ಪ್ರತಿಭಟನಾ ನಿರತ ಕೆಲವರು ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಜಿಲ್ಲೆಯ ಹುಮ್ನಾಬಾದ್ ನಲ್ಲಿ ಶುಕ್ರವಾರ ಬಿ ಎಸ್ ಪಿ ಮುಖಂಡ ಅಂಕುಶ್ ಗೋಖಲೆ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮನವಿ ಸ್ವೀಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ್ ಅವರೊಂದಿಗೆ ಪ್ರತಿಭಟನಾನಿರತರು ವಾಗ್ವಾದ ನಡೆಸಿದ್ದರು.
ಆಗ ಪ್ರತಿಭಟನಾ ನಿರತರು ಬೂಟುಗಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಲ್ಲದೆ, ಕಚೇರಿಯಲ್ಲಿನ ಹಲವು ವಸ್ತುಗಳನ್ನು ಧ್ವಂಸ ಮಾಡಿದ್ದಾರೆ ಎಂದು ತಹಶೀಲ್ದಾರ್ ಪ್ರದೀಪ್ ಕುಮಾರ್ ಅವರು, ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು, ಬಿ ಎಸ್ ಪಿ ಮುಖಂಡ ಅಂಕುಶ್ ಗೋಖಲೆ, ದೇವಿಂದ್ರ, ಜಮೀಲ್ ಖಾನ್, ಗೌತಮ್ ರಾಜಕುಮಾರ್ ಶಿಂಧೆ ಸೇರಿದಂತೆ ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಲ್ಲದೇ, ಬಿ ಎಸ್ ಪಿ ಮುಖಂಡರು ಕೂಡ ತಹಸೀಲ್ದಾರ್ ವಿರುದ್ಧ ಜಾತಿ ನಿಂದನೆಯ ಪ್ರತಿ ದೂರು ದಾಖಲಿಸಿದ್ದಾರೆ.