ಉಕ್ರೇನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ತವರಿಗೆ ಮರಳಲು ಹಾತೊರೆಯುತ್ತಿದ್ದಾರೆ. ಆದ್ರೆ ಹರಿಯಾಣ ಮೂಲದ ವಿದ್ಯಾರ್ಥಿನಿಯೊಬ್ಬಳು ಉಕ್ರೇನ್ ತೊರೆದು ಭಾರತಕ್ಕೆ ಮರಳಲು ನಿರಾಕರಿಸಿದ್ದಾಳೆ.
ತನಗೆ ಆಶ್ರಯ ನೀಡಿರುವ ಪಿಜಿ ಮಾಲೀಕನ ಕುಟುಂಬವೀಗ ಸಂಕಷ್ಟದಲ್ಲಿದ್ದು, ಅವರನ್ನು ಬಿಟ್ಟುಬರಲು ತಾನು ಸಿದ್ಧಳಿಲ್ಲ ಅಂತಾ ಹೇಳಿದ್ದಾಳೆ. ಹರಿಯಾಣ ಮೂಲದ 17 ವರ್ಷದ ವಿದ್ಯಾರ್ಥಿನಿ ನೇಹಾ ವೈದ್ಯಕೀಯ ವ್ಯಾಸಂಗ ಮಾಡಲು ಉಕ್ರೇನ್‌ಗೆ ತೆರಳಿದ್ದಳು. ಕಳೆದ ವರ್ಷ ಕೀವ್ ನಲ್ಲಿರೋ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಯಾಗಿದ್ದಳು.
ಆದ್ರೆ ಆಕೆಗೆ ವಿದ್ಯಾರ್ಥಿ ನಿಲಯದಲ್ಲಿ ಸೀಟು ಸಿಕ್ಕಿರಲಿಲ್ಲ. ತಾತ್ಕಾಲಿಕವಾಗಿ ಅಲ್ಲಿನ ಮನೆಯೊಂದರಲ್ಲಿ ನೇಹಾ ಆಶ್ರಯ ಪಡೆದಿದ್ದಳು. ರಷ್ಯಾ , ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡುತ್ತಿದ್ದಂತೆ ಆ ಮನೆಯ ಮಾಲೀಕ ಸ್ವಯಂಪ್ರೇರಿತರಾಗಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದಾನೆ.
ಹಾಗಾಗಿ ಆತನ ಪತ್ನಿ ಹಾಗೂ ಮೂವರು ಮಕ್ಕಳು ಈಗ ಆತಂಕದಲ್ಲಿದ್ದಾರೆ. ಈ ಸಮಯದಲ್ಲಿ ಅವರನ್ನು ಬಿಟ್ಟು ಬರಲು ತನಗೆ ಮನಸ್ಸು ಒಪ್ಪುತ್ತಿಲ್ಲ ಅಂತಾ ನೇಹಾ ಹೇಳಿದ್ದಾಳೆ.