ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಳ್ಳುಗಾಡಿಯ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಬಂದ ವಿಡಿಯೋ ವೈರಲ್ ಆದ ಬಳಿಕ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಈ ಘಟನೆ ಸಂಬಂಧ ತನಿಖೆಗೆ ಆದೇಶ ನೀಡಿದ್ದಾರೆ. ಬಲ್ಲಿಯಾ ಜಿಲ್ಲೆಯ ಅಂದೌರ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿತ್ತು.
ವಿಡಿಯೋದಲ್ಲಿ ಚಿಲ್ಖರ್ ಬ್ಲಾಕ್ ಗ್ರಾಮದ ನಿವಾಸಿ ಸಕುಲ್ ಪ್ರಜಾಪತಿ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತ್ನಿ ಜೋಗ್ನಿಯನ್ನು ತಳ್ಳು ಗಾಡಿಯನ್ನು ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿದ್ದರು. ಈ ಘಟನೆ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಇದೀಗ ವೈದ್ಯಕೀಯ ಹಾಗೂ ಆರೋಗ್ಯ ಮಹಾನಿರ್ದೇಶಕರಿಗೆ ಡಿಸಿಎಂ ಆದೇಶ ನೀಡಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ನೀರಜ್ ಪಾಂಡೆ ತಿಳಿಸಿದ್ರು.
ಮಾರ್ಚ್ 28 ರಂದು, ಪ್ರಜಾಪತಿ ತನ್ನ ಹೆಂಡತಿಯನ್ನು ತನ್ನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ವೈದ್ಯರು ಕೆಲವು ಔಷಧಿಗಳನ್ನು ನೋಡಿ ಜೋಗ್ನಿಯನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಆ್ಯಂಬುಲೆನ್ಸ್ ಸೇವೆ ಸಿಗದ ಕಾರಣ ಪತ್ನಿಯನ್ನು ಗಾಡಿಯಲ್ಲಿಯೇ ಬಿಟ್ಟು ಮನೆಗೆ ಹೋಗಿ ಹಣ ಹಾಗೂ ಬಟ್ಟೆಯನ್ನು ತಂದು ಬಳಿಕ ಆಕೆಯನ್ನು ಮಿನಿ ಟ್ರಕ್ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಮೃತಪಟ್ಟಿದ್ದರು.