ಇಂದು ಹಲವಾರು ಕಾರಣಗಳಿಂದ ತಲೆಯಲ್ಲಿರುವ ಸಮೃದ್ದ ಕೂದಲು ಉದುರುತ್ತಿದ್ದು, ಹದಿಹರೆಯದಲ್ಲಿಯೇ ಬೊಕ್ಕ ತಲೆಯವರಾಗುತ್ತಿದ್ದಾರೆ. ಇಂತವರ ತಲೆಬಿಸಿಯನ್ನು ಕಡಿಮೆ ಮಾಡುವ ತೈಲ ತಮ್ಮದೆಂದು ಪ್ರಚಾರ ಮಾಡುತ್ತಿರುವ ಹಲವಾರು ಕಂಪನಿಗಳು ಕೂದಲ ಹೆಸರಿನಲ್ಲಿ ಕೋಟ್ಯಾಂತರ ಆದಾಯ ಪಡೆಯುತ್ತಿವೆ.
ಆದರೆ ಹಣ ಕೊಟ್ಟು ತೈಲ ತೆಗೆದುಕೊಂಡವನಿಗೆ ಕೂದಲೂ ಇಲ್ಲ. ಹಣವೂ ಹೋಯಿತು ಎಂಬ ಪರಿಸ್ಥಿತಿ. ಹಾಗಾಗಿ ಯಾವುದೇ ಜಾಹೀರಾತಿನ ಮೋಡಿಗೆ ಒಳಗಾಗದೇ ಕೂದಲು ಉಳಿಸಿಕೊಳ್ಳಲು ನೀವೇ ಮಾಡಬಹುದಾದ ಟಿಪ್ಸ್ ಇಲ್ಲಿದೆ.
ಕೂದಲು ಉದುರುವುದನ್ನು ತಪ್ಪಿಸೋದು ಹೇಗೆ..?
ಇಂದಿನ ದಿನಗಳಲ್ಲಿ ಎದುರಾಗುವ ಅತಿಯಾದ ಒತ್ತಡ, ಖಿನ್ನತೆ ಕೂದಲು ಉದುರುವಿಕೆಗೆ ಸಾಮಾನ್ಯವಾಗಿ ಕಾರಣವಾಗುತ್ತದೆ. ಹಾಗಾಗಿ ಒತ್ತಡ ಕಡಿಮೆ ಮಾಡಿಕೊಳ್ಳಿ. ಇದಕ್ಕೆ ಬೇಕಾದರೆ ಧ್ಯಾನದ ಮೊರೆ ಹೋಗಿ. ಇದರಿಂದ ಹಾರ್ಮೋನಿನ ಅಸಮತೋಲನ ತಡೆಯಲು ಅನುಕೂಲವಾಗುತ್ತದೆ.
ವಾರಕ್ಕೆರಡು ಬಾರಿ ಆಲಿವ್, ಕೊಬ್ಬರಿ ಎಣ್ಣೆ, ಹರಳೆಣ್ಣೆ ಹೀಗೆ ಯಾವುದೇ ಒಂದು ನೈಸರ್ಗಿಕ ತೈಲವನ್ನು ಉಗುರು ಬೆಚ್ಚಗೆ ಆಗುವಷ್ಟು ಬಿಸಿ ಮಾಡಿ ತಲೆಯ ನೆತ್ತಿಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ.
ಬೆಳ್ಳುಳ್ಳಿ ರಸ, ಈರುಳ್ಳಿ ರಸ ಅಥವಾ ಶುಂಠಿ ರಸವನ್ನು ರಾತ್ರಿ ನೆತ್ತಿಗೆ ಹಾಕಿ ಚೆನ್ನಾಗಿ ಉಜ್ಜಿಕೊಂಡು ಮಲಗಿ ಬೆಳಗ್ಗೆ ಎದ್ದು ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ಕೂದಲ ಬುಡ ಸದೃಢವಾಗುವುದಲ್ಲದೇ ತಲೆಯಲ್ಲಿನ ಹೊಟ್ಟೂ ನಿವಾರಣೆಯಾಗುತ್ತದೆ.