ಈಗ ಹಣ್ಣುಗಳ ರಾಜ ಮಾವಿನ ಸೀಸನ್ ಆಗಿದ್ದು, ಹೀಗಾಗಿ ಮಾರುಕಟ್ಟೆಯಲ್ಲಿ ಇವುಗಳದ್ದೇ ಕಾರುಬಾರು. ಒಳ್ಳೆಯ ತಳಿಯ ಹಣ್ಣುಗಳಿಗೆ ಕೆಜಿಗೆ ಸಾವಿರ ರೂಪಾಯಿ ತನಕ ಬೆಲೆ ಇರಬಹುದು. ಆದರೆ ಇಲ್ಲಿ ಪ್ರದರ್ಶನಕ್ಕೆಂದು ತಂದಿಟ್ಟಿರುವ ಒಂದು ಹಣ್ಣಿನ ಬೆಲೆಯೇ ತಲೆ ತಿರುಗಿಸುವಂತಿದೆ.
ಹೌದು, ಕೊಪ್ಪಳದ ತೋಟಗಾರಿಕೆ ಇಲಾಖೆಯಲ್ಲಿ ಮಂಗಳವಾರದಿಂದ ಹತ್ತು ದಿನಗಳ ಕಾಲ ಮಾವು ಮೇಳ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವು ಎಂಬ ಹೆಗ್ಗಳಿಕೆ ಹೊಂದಿರುವ ‘ಮಿಯಾ ಜಾಕಿ’ ಸ್ಥಳೀಯ ಒಂದು ಹಣ್ಣನ್ನು ಮಾರಾಟಕ್ಕಲ್ಲ ಪ್ರದರ್ಶನಕ್ಕೆಂದು ಇಡಲಾಗಿದೆ.
ಇದಕ್ಕೆ ಕಾರಣ ಇದರ ದುಬಾರಿ ಬೆಲೆ. ಈ ತಳಿಯ ಮಾವಿನ ಹಣ್ಣು ಕೆಜಿಗೆ ಎರಡೂವರೆ ಲಕ್ಷ ರೂಪಾಯಿಗಳಾಗಿದ್ದು, ಒಂದು ಹಣ್ಣಿನ ಬೆಲೆಯೇ ಬರೋಬ್ಬರಿ 40,000 ರೂಪಾಯಿಗಳಾಗಿದೆ. ಹೀಗಾಗಿ ಈ ತಳಿಯನ್ನು ಕೊಪ್ಪಳದಲ್ಲಿ ಬೆಳೆಯಲು ಪ್ರೇರಣೆ ನೀಡುವ ಸಲುವಾಗಿ ಒಂದು ಹಣ್ಣನ್ನು ಖರೀದಿಸಿ ಪ್ರದರ್ಶನಕ್ಕೆ ಇಡಲಾಗಿದೆ.
ಅತಿ ಸಿಹಿ ರುಚಿಯನ್ನು ಹೊಂದಿರುವ ಈ ಹಣ್ಣಿನಲ್ಲಿ ವಿಟಮಿನ್ ಸಹ ಇದ್ದು, ಮಾವಿನ ಸಸಿಯ ಬೆಲೆಯೇ 15 ಸಾವಿರ ರೂಪಾಯಿಗಳಾಗಿದೆ. ರೈತರು ಇದನ್ನು ಬೆಳೆಯಲು ಇಷ್ಟಪಟ್ಟರೆ ಇವುಗಳನ್ನು ತರಿಸಿಕೊಡುವುದಾಗಿ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ ಹೇಳಿದ್ದಾರೆ.