2021ರ ಜನವರಿಯಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಭಾರತದಿಂದ ವಿದೇಶಿ ಪ್ರಜೆಗಳಾದವರ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ವಿದೇಶದಿಂದ ಭಾರತೀಯ ನಾಗರಿಕರಾದವರ ಸಂಖ್ಯೆಗಿಂತ 25 ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ.
2021ರ ಮೊದಲ ಒಂಬತ್ತು ತಿಂಗಳಲ್ಲಿ 1.1 ಲಕ್ಷಕ್ಕೂ ಅಧಿಕ ಭಾರತೀಯರು ಬೇರೆ ದೇಶಗಳ ಪೌರತ್ವವನ್ನು ಪಡೆದಿದ್ದಾರೆ. ಈ ನಡುವೆ ಭಾರತವು ಜನವರಿ 2016ರಿಂದ 2020ರ ಡಿಸೆಂಬರ್ವರೆಗೆ 4177 ವಿದೇಶಿಯರಿಗೆ ಪೌರತ್ವವನ್ನು ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಗೃಹ ಸಚಿವಾಲಯದ ಪ್ರತ್ಯೇಕ ದತ್ತಾಂಶಗಳು ಮಾಹಿತಿ ನೀಡಿದೆ.
ಭಾರತೀಯ ಪೌರತ್ವವನ್ನು ಕೋರಿ ಇನ್ನೂ 10,635 ಅರ್ಜಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಬಾಕಿ ಉಳಿದಿದೆ. ಒಂದು ವೇಳೆ ಈ ಎಲ್ಲಾ ಅರ್ಜಿಗಳಿಗೆ ಪೌರತ್ವವನ್ನು ನೀಡಿದರೂ ಸಹ ವಿದೇಶದಿಂದ ಭಾರತದ ಪೌರತ್ವವನ್ನು ಪಡೆದವರ ಸಂಖ್ಯೆಯು ಕೇವಲ 14,815 ಆಗಿರಲಿದೆ.
ಭಾರತೀಯರು ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಹೊಂದಿದವರು ಇತರೆ ದೇಶಗಳ ಪೌರತ್ವಕ್ಕೆ ಆದ್ಯತೆ ನೀಡುತ್ತಾರೆ. ಯುರೋಪಿಯನ್ನ ಸಣ್ಣ ಸಣ್ಣ ರಾಷ್ಟ್ರಗಳು ಹಾಗೂ ಉತ್ತರ ಅಮೆರಿಕ ಸೇರಿದಂತೆ ವಿವಿಧ ಕಡೆಗಳಲ್ಲಿ ಪೌರತ್ವವನ್ನು ಅತ್ಯಂತ ಸುಲಭವಾಗಿ ನೀಡುತ್ತವೆ. ಇದು ವಿದೇಶದ ಪೌರತ್ವವನ್ನು ಪಡೆಯುವವರಿಗೆ ಹೆಚ್ಚು ಸಹಕಾರಿ ಎನಿಸಿದೆ ಎಂದು ಉದ್ಯಮಿ ನಿಶಿತ್ ದೇಸಾಯಿ ಹೇಳಿದರು.
ದತ್ತಾಂಶಗಳು ನೀಡಿರುವ ಮಾಹಿತಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಆರು ಲಕ್ಷಕ್ಕೂ ಅಧಿಕ ಭಾರತೀಯರಲ್ಲಿ 42 ಪ್ರತಿಶತ ಮಂದಿ ಅಮೆರಿಕದ ಪ್ರಜೆಯಾಗಿದ್ದಾರೆ. ಆದರೆ 2021ರ ಒಂಬತ್ತು ತಿಂಗಳಲ್ಲಿ, ತಮ್ಮ ಪೌರತ್ವವನ್ನು ತ್ಯಜಿಸಿದ ಇಬ್ಬರು ಭಾರತೀಯರಲ್ಲಿ ಒಬ್ಬರು ಅಲ್ಲಿನ ಪೌರತ್ವವನ್ನು ಪಡೆದಿದ್ದಾರೆ. ಅಮೆರಿಕದ ಬಳಿಕ ಕೆನಡಾ ಭಾರತೀಯರಿಗೆ (91,000) ಹೆಚ್ಚಿನ ಸಂಖ್ಯೆಯ ಪೌರತ್ವಗಳನ್ನು ನೀಡಿದೆ, ನಂತರ ಆಸ್ಟ್ರೇಲಿಯಾ (86,933) ಮತ್ತು ಇಂಗ್ಲೆಂಡ್ (66,193) ಮತ್ತು ಇಟಲಿ (23,940). ಎಂಬತ್ತಾರು ಇತರ ದೇಶಗಳು ಒಟ್ಟಾಗಿ 83,191 ಭಾರತೀಯರಿಗೆ ಪೌರತ್ವವನ್ನು ನೀಡಿವೆ.