ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಲಾರಂಭಿಸುತ್ತದೆ. ತಲೆಹೊಟ್ಟು, ಬೇಗನೆ ಕೂದಲು ಬೆಳ್ಳಗಾಗುವುದು ಹೀಗೆ ಅನೇಕ ಸಮಸ್ಯೆಗಳು ನಮ್ಮ ಕೆಟ್ಟ ಜೀವನಶೈಲಿಯಿಂದಾಗಿಯೇ ಶುರುವಾಗುತ್ತವೆ. ಈ ಸಮಸ್ಯೆಯನ್ನು ತಪ್ಪಿಸಲು ನಾವು ರಾಸಾಯನಿಕ ಬೆರೆಸಿದ ಅನೇಕ ಉತ್ಪನ್ನಗಳನ್ನು ಬಳಸುತ್ತೇವೆ. ಅವುಗಳಿಂದ ಪ್ರಯೋಜನವಾಗುವ ಬದಲು ಕೂದಲಿಗೆ ಇನ್ನಷ್ಟು ಹಾನಿಯಾಗುತ್ತದೆ. ಹಾಗಾಗಿ ಕೆಲವು ನೈಸರ್ಗಿಕ ಹಣ್ಣು ತರಕಾರಿಗಳನ್ನು ನಾವು ಕೂದಲಿನ ಆರೋಗ್ಯಕ್ಕಾಗಿ ಬಳಸಬೇಕು. ಬೀಟ್ರೂಟ್ ಕೂಡ ಅವುಗಳಲ್ಲೊಂದು. ದೇಹದಲ್ಲಿನ ರಕ್ತಹೀನತೆಯನ್ನು ಹೋಗಲಾಡಿಸುವ ಬೀಟ್ರೂಟ್, ಕೂದಲಿನ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ತಲೆಹೊಟ್ಟಿಗೂ ಇದು ರಾಮಬಾಣವಿದ್ದಂತೆ.
ಬೀಟ್ರೂಟ್ ಮತ್ತು ಬೇವಿನ ಮಿಶ್ರಣ: ತಲೆಹೊಟ್ಟು ಕೂದಲನ್ನು ಹೆಚ್ಚು ಹಾನಿಗೊಳಿಸುತ್ತದೆ. ಇದನ್ನು ಹೋಗಲಾಡಿಸಲು ಬೀಟ್ರೂಟ್ ಮತ್ತು ಬೇವಿನ ಎಲೆಗಳ ಮಿಶ್ರಣವನ್ನು ತಯಾರಿಸಬಹುದು. ಕಹಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದನ್ನು ಫಿಲ್ಟರ್ ಮಾಡಿಕೊಳ್ಳಿ. ಅದಕ್ಕೆ 8 ರಿಂದ 10 ಹನಿ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿ. ಅದಕ್ಕೆ ಬೀಟ್ರೂಟ್ ಪೇಸ್ಟ್ ಹಾಕಿ 20-25 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಈ ಮಿಶ್ರಣವನ್ನು ಫಿಲ್ಟರ್ ಮಾಡಿಕೊಂಡು, ಬೀಟ್ರೂಟ್ ಬೆರೆಸಿದ ಬೇವಿನ ನೀರನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿ . ಹೀಗೆ ಮಾಡುವುದರಿಂದ ತಲೆಹೊಟ್ಟು ಮಾಯವಾಗುತ್ತದೆ.
ಬೀಟ್ರೂಟ್ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ನೀವು ನಿಯಮಿತವಾಗಿ ಬೀಟ್ರೂಟ್ ರಸವನ್ನು ಸೇವನೆ ಮಾಡಬಹುದು. ಇದು ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಇದರ ಪೋಷಣೆಯನ್ನು ಹೆಚ್ಚಿಸಲು ಬೀಟ್ರೂಟ್ ಜೊತೆಗೆ ನೆಲ್ಲಿಕಾಯಿ ಮತ್ತು ಕ್ಯಾರೆಟ್ ಬೆರೆಸಿ. ಜೊತೆಗೆ 2-3 ಕರಿಬೇವಿನ ಎಲೆಗಳನ್ನು ಕೂಡ ಸೇರಿಸಿಕೊಂಡು ಜ್ಯೂಸ್ ಮಾಡಿಕೊಂಡು ಸೇವಿಸಿ.