ಬಿಳಿಯಾಗುತ್ತಿರುವ ತಲೆಕೂದಲಿನ ಸಮಸ್ಯೆ ನಿವಾರಿಸಲು ಅಡುಗೆ ಮನೆಯಲ್ಲಿ ಒಂದಷ್ಟು ಔಷಧಿಗಳಿವೆ. ಅವುಗಳನ್ನು ಬಳಸಿ ಕಪ್ಪನೆಯ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.
ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಹಜ. ಪ್ರಸ್ತುತ ಯುವಕರ ಕೂದಲೂ ಬೆಳ್ಳಗಾಗುತ್ತಿದೆ. ಇದಕ್ಕೆ ಸುಲಭವಾದ ಮನೆಮದ್ದುಗಳಿವೆ. ಕರಿಬೇವಿನ ಎಲೆಗಳನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಕೂದಲಿನ ಬಣ್ಣವನ್ನು ಕಾಪಾಡಿಕೊಳ್ಳಬಹುದು ಎಂಬುದು ತಜ್ಞರ ಅಭಿಪ್ರಾಯ.
ಸಾಧ್ಯವಾದಷ್ಟು ಪೋಷಕಾಂಶಯುಕ್ತ ಆಹಾರ ಸೇವಿಸಿ, ಹಸಿರು ಎಲೆಗಳ ತರಕಾರಿಗಳು, ಟೊಮ್ಯಾಟೊ, ಬಾಳೆಹಣ್ಣು ಮತ್ತು ಹೂ ಕೋಸು ಮುಂತಾದ ಆಹಾರ ಪದಾರ್ಥಗಳು, ಜೀವಸತ್ವಗಳು, ಖನಿಜಗಳು ಮತ್ತು ಕಬ್ಬಿಣದಿಂದ ಸಮೃದ್ಧವಾಗಿವೆ. ಇದನ್ನು ಧಾರಾಳವಾಗಿ ಸೇವಿಸುವುದರಿಂದ ನೆರೆ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ.
ನೆಲ್ಲಿಕಾಯಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ನೆತ್ತಿಗೆ ಪ್ರತಿದಿನ ಹಚ್ಚಿ. ಇದು ನಿಮ್ಮ ಕೂದಲನ್ನು ತೇವಗೊಳಿಸುತ್ತದೆ ಮತ್ತು ನೈಸರ್ಗಿಕ ಹೊಳಪು ನೀಡುತ್ತದೆ. ಒಂದು ಕಪ್ ಕಪ್ಪು ಚಹಾವನ್ನು ತಯಾರಿಸಿ ಅದಕ್ಕೆ ಒಂದು ಚಮಚ ಉಪ್ಪು ಸೇರಿಸಿ. ಇದನ್ನು ತಲೆಗೆ ಮಸಾಜ್ ಮಾಡಿ. ಇದು ಕನಿಷ್ಠ ಅರ್ಧ ಗಂಟೆಯವರೆಗೆ ನಿಮ್ಮ ಕೂದಲಿನ ಮೇಲೆ ಇರಲಿ ನಂತರ ಅದನ್ನು ತೊಳೆಯಿರಿ.